ಬೆಂಗಳೂರು : ಪರಿಶಿಷ್ಟ ಜಾತಿ ನಿಂದನೆ, ಮಹಿಳೆಯರನ್ನು ಗುರಿಯಾಗಿಸಿ ಅವಾಚ್ಯ ಶಬ್ದಗಳಿಂದ ಬೈದ ಹಾಗೂ ಗುತ್ತಿಗೆದಾರರಿಗೆ ಲಂಚಕ್ಕೆ ಬೇಡಿಕೆ ಇರಿಸಿ ಕೊಲೆ ಬೆದರಿಕೆ ಹಾಕಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ಪೂರೈಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶವನ್ನು ಗುರುವಾರಕ್ಕೆ (ಸೆ.19) ಕಾಯ್ದಿರಿಸಿದೆ.
ಈ ಕುರಿತ ಅರ್ಜಿಯನ್ನು, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಬುಧವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಿ.ಎಸ್.ಪ್ರದೀಪ್ ಕುಮಾರ್ ಆರೋಪಿಯ ಜಾಮೀನು ಅರ್ಜಿಗೆ ಸುದೀರ್ಘ ಆಕ್ಷೇಪಣೆ ಸಲ್ಲಿಸಿದರು.
ಮುನಿರತ್ನ ಪರ ಹೈಕೋರ್ಟ್ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದ ಮಂಡಿಸಿದರು.