ಬೆಂಗಳೂರು: ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳು ಜನರಿಗೆ ದೊರೆಯದಂತೆ ತಡೆಯಲು, ದಾಸ್ತಾನುಗಳನ್ನು ಹಿಂಪಡೆಯಲು ಪ್ರತ್ಯೇಕ ನೀತಿ ರೂಪಿಸಲಾಗುವುದು. ಔಷಧಗಳ ಬಗ್ಗೆ ಜಾಗೃತಿ ಮೂಡಿಸಲು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜನರ ಆರೋಗ್ಯದ ದೃಷ್ಟಿಯಿಂದ ನಿಯಮಿತವಾಗಿ ಔಷಧಗಳ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತಿದ್ದಾರೆ. ಈ ಜನವರಿಯಲ್ಲಿ 1,133 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಗುರಿಪಡಿಸಲಾಗಿತ್ತು. ಅವುಗಳಲ್ಲಿ 106 ಔಷಧ ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಫೆಬ್ರುವರಿ ತಿಂಗಳಲ್ಲಿ 1,841 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದ್ದು, ಅವುಗಳಲ್ಲಿ ಈವರೆಗೆ 58 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲವೆಂಬ ವರದಿಗಳು ಬಂದಿವೆ. ಇಂತಹ ಔಷಧಗಳ ಬಗ್ಗೆ ಸಾರ್ವಜನಿಕರು ಹಾಗೂ ಮಾರಾಟಗಾರರಿಗೆ ಮಾಹಿತಿ ಒದಗಿಸುವ ಆ್ಯಪ್ ಒಂದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.
ಕಾಂತಿವರ್ಧಕಗಳ ಗುಣಮಟ್ಟವನ್ನು ಪರೀಕ್ಷಿಸಲು 2024ರ ಡಿಸೆಂಬರ್ ತಿಂಗಳಲ್ಲಿ 262 ಕಾಂತಿವರ್ಧಕ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಅವುಗಳಲ್ಲಿ 120 ಮಾದರಿಗಳ ವರದಿ ಬಂದಿದ್ದು, ಅವು ಉತ್ತಮ ಗುಣಮಟ್ಟದ ಕಾಂತಿವರ್ಧಕಗಳಾಗಿವೆ.
ಉಳಿದ ಮಾದರಿಗಳು ವಿಶ್ಲೇಷಣಾ ಹಂತದಲ್ಲಿವೆ. ಔಷಧ ಮತ್ತು ಕಾಂತಿವರ್ಧಕ ಕಾಯ್ದೆ 1940 ಮತ್ತು ಅದರಡಿಯ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ 75 ಸಂಸ್ಥೆಗಳ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲಾಗಿದೆ’ ಎಂದು ಹೇಳಿದರು.
ಆ್ಯಂಟಿಬಯಾಟಿಕ್ ಔಷಧಗಳ ದುರ್ಬಳಕೆ ತಡೆಗೆ ಸಂಬಂಧಿಸಿದಂತೆ ಫೆ.17ರಿಂದ ಫೆ.19ರವರೆಗೆ ರಾಜ್ಯದಾದ್ಯಂತ ಔಷಧ ಮಳಿಗೆಗಳಲ್ಲಿ ಅಧಿಕಾರಿಗಳು ವಿಶೇಷ ತಪಾಸಣೆ ನಡೆಸಿದ್ದಾರೆ. 52 ಔಷಧ ಮಳಿಗೆಗಳಲ್ಲಿ ವೈದ್ಯರ ಶಿಫಾರಸು ಇಲ್ಲದೆ ಆ್ಯಂಟಿಬಯಾಟಿಕ್ ಔಷಧ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಅವುಗಳ ವಿರುದ್ಧ ತನಿಖೆ ಪ್ರಗತಿಯಲ್ಲಿದೆ’ ಎಂದು ವಿವರಿಸಿದರು.
ಹಚ್ಚೆಯ ಶಾಯಿಯಲ್ಲಿ 22 ಬಗೆ ಭಾರ ಲೋಹ
‘ಆಹಾರ ಸುರಕ್ಷತೆ ಮತ್ತು ಔಷಧ ಗುಣಮಟ್ಟ ಇಲಾಖೆ ಅಧಿಕಾರಿಗಳು ಮಾರುಕಟ್ಟೆಯಲ್ಲಿರುವ ಹಚ್ಚೆಯ (ಟ್ಯಾಟೂ) ಶಾಯಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಅವುಗಳಲ್ಲಿ 22 ಬಗೆಯ ಭಾರ ಲೋಹಗಳು ಕಂಡುಬಂದಿವೆ. ಹಚ್ಚೆಗೆ ಬಳಸುವ ಶಾಯಿಗೆ ಯಾವುದೇ ಪ್ರಮಾಣಿತ ಗುಣಮಟ್ಟವಿಲ್ಲ. ಔಷಧ ಮತ್ತು ಕಾಂತಿವರ್ಧಕ ಕಾಯ್ದೆ ವ್ಯಾಪ್ತಿಗೆ ಇದು ಒಳಪಟ್ಟಿಲ್ಲ. ಇದರಲ್ಲಿನ ಭಾರ ಲೋಹಗಳು ಚರ್ಮದ ಮೂಲಕ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಅನೇಕ ಚರ್ಮ ರೋಗಗಳು ಸೋಂಕು ರೋಗಗಳಿಗೆ ತುತ್ತಾಗುವ ಸಂಭವವೂ ಇರುತ್ತದೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.
‘ಈ ಬಗ್ಗೆ ನಿಯಮ ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಆದ್ದರಿಂದ ಹಚ್ಚೆಗೆ ಬಳಸುವ ಶಾಯಿಯನ್ನು ಕಾಂತಿವರ್ಧಕಗಳ ಕಾಯ್ದೆಯಡಿ ಅಡಿಗೆ ತರಲು ಕೇಂದ್ರ ಔಷಧ ನಿಯಂತ್ರಕರಿಗೆ ಪತ್ರ ಬರೆಯಲಾಗಿದೆ. ಬಿಐಎಸ್ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಕಾರ ಮಾನದಂಡ ರೂಪಿಸಲು ಕೇಂದ್ರ ಸರ್ಕಾರ ಕ್ರಮ ವಹಿಸಬೇಕು’ ಎಂದರು.
ನೀರಿನ ಮಾದರಿ ವಿಶ್ಲೇಷಣೆ’
‘ಫೆಬ್ರುವರಿಯಲ್ಲಿ ವಿಶೇಷ ಅಭಿಯಾನದಡಿ ಬಾಟಲಿಯಲ್ಲಿ ತುಂಬಿ ಮಾರಾಟ ಮಾಡುವ ನೀರಿನ 288 ಮಾದರಿಗಳನ್ನು ವಿಶ್ಲೇಷಣೆಗೆ ಸಂಗ್ರಹಿಸಲಾಗಿದೆ. ಅವುಗಳ ವಿಶ್ಲೇಷಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಲ್ಲದೆ ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣಗಳ ಬಳಕೆ ಬಗ್ಗೆ ಖಚಿತಪಡಿಸಿಕೊಳ್ಳಲು 106 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಅವುಗಳಲ್ಲಿ 31 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು 26 ಮಾದರಿಗಳು ಅಸುರಕ್ಷಿತವೆಂದು ವರದಿ ಬಂದಿದೆ. ಐದು ಮಾದರಿಗಳು ಮಾತ್ರ ಸುರಕ್ಷಿತವಾಗಿವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.














