ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜೈಲಿನಲ್ಲಿ ಅಕ್ರಮವಾಗಿ ಕೈದಿಗಳು ಮೊಬೈಲ್ ಇಟ್ಟುಕೊಂಡಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮತ್ತಷ್ಟು ಮತ್ತಷ್ಟು ಮೊಬೈಲ್‌ಗಳು ಕೈದಿಗಳ ಬಳಿ ಸಿಕ್ಕಿವೆ.
ಪ್ರಭಾರ ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರು ಜೈಲಿನಲ್ಲಿ ತಪಾಸಣೆ ನಡೆಸಿದಾಗ 7 ಮೊಬೈಲ್ ಸೇರಿ ಇನ್ನೂ ಹಲವು ನಿಷೇಧಿತ ವಸ್ತುಗಳು ಕಂಡುಬಂದಿವೆ. ಜೈಲಿನಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಗಲಾಟೆ ನಡೆದಿತ್ತು. ಮಾದಕ ಪದಾರ್ಥ ಕೊಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಮಾಡಿದ್ದರು.
ಜೈಲರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಕಂಪ್ಯೂಟರ್, ಟಿವಿ ಒಡೆದು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಬ್ಯಾರಕ್‌ಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಘಟನೆ ಸಂಬಂಧ ಶಹರ ಠಾಣೆಯಲ್ಲಿ ಜೈಲರ್ ದೂರು ದಾಖಲಿಸಿದ್ದಾರೆ.
ಈ ನಡುವೆ ಜೈಲಿನಲ್ಲಿದ್ದು ಗಲಾಟೆಗೆ ಕಾರಣವಾಗಿದ್ದ ಮಂಗಳೂರು ಮೂಲದ ನಾಲ್ವರು ಕೈದಿಗಳನ್ನು ರಾಜ್ಯದ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿದೆ. ಎರಡು ತಿಂಗಳ ಹಿಂದೆ ಮಂಗಳೂರು ಜೈಲಿನಿಂದ ನಾಲ್ವರನ್ನು ಕಾರವಾರಕ್ಕೆ ಸ್ಥಳಾಂತರಿಸಲಾಗಿತ್ತು. ಅವರೇ ಗಲಾಟೆಗೆ ಕಾರಣವಾಗಿದ್ದರು. ಅವರನ್ನು ಬಳ್ಳಾರಿ, ಬೆಳಗಾವಿ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ.















