ನವದೆಹಲಿ : ಭಾರತ 54 ವರ್ಷಗಳ ನಂತರ ಮತ್ತೆ ದೇಶವ್ಯಾಪಿ ಯುದ್ಧ ಭದ್ರತಾ ಮಾಕ್ ಡ್ರಿಲ್ ನಡೆಸಲು ಸಜ್ಜಾಗಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಯುದ್ಧ ಸಮಯದ ತುರ್ತು ಪರಿಸ್ಥಿತಿಗೆ ತಯಾರಿ ಪ್ರದರ್ಶಿಸುವ ತರಬೇತಿ ಕಾರ್ಯಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ, ದೇಶದ 244 ಸಿವಿಲ್ ಡಿಫೆನ್ಸ್ ಜಿಲ್ಲೆಗಳಲ್ಲಿ ನಾಳೆ (ಮೇ 7) ನಾಗರಿಕ ರಕ್ಷಣಾ ಮಾಕ್ ಡ್ರಿಲ್ ನಡೆಯಲಿದೆ. ಈ ಮಾಕ್ ಡ್ರಿಲ್ನಲ್ಲಿ ಯುದ್ಧದ ಸಂದರ್ಭ ಉಂಟಾಗುವ ಪರಿಸ್ಥಿತಿಗಳನ್ನು ಕಲ್ಪಿಸಿ, ಸಾರ್ವಜನಿಕರ ಭದ್ರತೆ ಹಾಗೂ ಸರ್ಕಾರದ ಪ್ರತಿಕ್ರಿಯಾ ಸಾಮರ್ಥ್ಯವನ್ನು ಪರೀಕ್ಷಿಸಲಾಗುವುದು.
ಈ ತುರ್ತು ತರಬೇತಿಯ ಭಾಗವಾಗಿ, ಹಲವೆಡೆ ವಿದ್ಯುತ್ ಕಡಿತ, ವಾಹನ ಸಂಚಾರ ನಿಲ್ಲಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ಕ್ರಮಗಳ ಅನುಷ್ಠಾನ ಮತ್ತು ಜನರಲ್ಲಿ ಜಾಗೃತಿಯ ಮೂಡಿಸುವ ಕಾರ್ಯ ನಡೆಯಲಿದೆ. ಈಗಾಗಲೇ ಪಂಜಾಬ್ನ ಫಿರೋಜ್ಪುರ್ ಕ್ಯಾಂಟೋನ್ಮೆಂಟ್ನಲ್ಲಿ ನಡೆದ ಪ್ರಾಥಮಿಕ ಮಾದರಿ ಡ್ರಿಲ್ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಮಾಕ್ ಡ್ರಿಲ್ ಎಂದರೇನು?
ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯ ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.
ಈ ತರಬೇತಿಯ ಉದ್ದೇಶ: ಜನರಿಗೆ ತುರ್ತು ಸಮಯದಲ್ಲಿ ಏನು ಮಾಡಬೇಕು ಎಂಬ ಜಾಗೃತಿ ನೀಡುವುದು. ವಿವಿಧ ಇಲಾಖೆಗಳ ನಡುವಿನ ಸಹಕಾರವನ್ನು ಹೆಚ್ಚಿಸುವುದು. ವೈರಿ ದೇಶದ ದಾಳಿಯಿಂದ ರಕ್ಷಣೆಗೆ ತಯಾರಿ ಕಲ್ಪಿಸುವುದು. ವಿದ್ಯುತ್ ಮತ್ತು ಇತರ ಮೂಲಸೌಕರ್ಯಗಳ ನಿರ್ವಹಣೆಯ ತುರ್ತು ವಿಧಾನಗಳನ್ನು ಪರೀಕ್ಷಿಸುವುದು.
ವಾಯು ದಾಳಿ ಅಥವಾ ಮಿಸೈಲ್ ಹಮ್ಲೆ ವೇಳೆ ಶತ್ರು ರಾಷ್ಟ್ರಗಳು ಲಕ್ಷ್ಯ ಸ್ಥಳ ಗುರುತಿಸಲು ನಗರ ದೀಪಗಳನ್ನು ಬಳಸಬಹುದು. ಹೀಗಾಗಿ, ಡ್ರಿಲ್ ಸಂದರ್ಭದಲ್ಲಿ ವಿದ್ಯುತ್ ಕಡಿತದ ಮೂಲಕ ರಕ್ಷಣಾತ್ಮಕ ವಿಧಾನಗಳು ಪರೀಕ್ಷಿಸಲಾಗುತ್ತವೆ. ಕೆಲವು ಪ್ರದೇಶಗಳಲ್ಲಿ ವಾಹನ ಸಂಚಾರವನ್ನೂ ನಿಲ್ಲಿಸಲಾಗುತ್ತದೆ.
ಈ ಡ್ರಿಲ್ ಪಾಕಿಸ್ತಾನದ ಪಹಲ್ಗಾಮ್ ದಾಳಿಯ ನಂತರ ಭಾರತದಲ್ಲಿ ನಡೆಯುತ್ತಿರುವ ಭದ್ರತಾ ಕ್ರಮಗಳ ಭಾಗವಾಗಿದ್ದು, ಭಾರತ ಯಾವತ್ತಾದರೂ ತುರ್ತು ಪರಿಸ್ಥಿತಿಗೆ ಸಜ್ಜಾಗಬೇಕಿದೆ ಎಂಬುದನ್ನು ಈ ಮೂಲಕ ಸರ್ಕಾರ ಸೂಚಿಸುತ್ತಿದೆ.
1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನ ನೇರವಾಗಿ ದಾಳಿ ನಡೆಸಿದ್ದರಿಂದ ದೇಶಕ್ಕೆ ತಕ್ಷಣದ ಪ್ರತಿಕ್ರಿಯೆ ನೀಡಬೇಕಾಗಿತ್ತು. ಅಂದು ಮಾಕ್ ಡ್ರಿಲ್ ನಡೆಸಲು ಸಮಯ ಮತ್ತು ಅವಕಾಶ ಇರಲಿಲ್ಲ. ಆದರೆ ಈಗ, ಮುಂಚಿತ ಸಿದ್ದತೆ ಮೂಲಕ ದೇಶವು ಯಾವುದೇ ರೀತಿಯ ಆಕ್ರಮಣಕ್ಕೆ ತಯಾರಿ ನಡೆಸುತ್ತಿದೆ.














