ಮನೆ Uncategorized ಮೈಸೂರು ಅರಮನೆ ಆವರಣದಲ್ಲಿ ಮಾಕ್ ಡ್ರಿಲ್

ಮೈಸೂರು ಅರಮನೆ ಆವರಣದಲ್ಲಿ ಮಾಕ್ ಡ್ರಿಲ್

0

ಮೈಸೂರು : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ನೆರೆಯ ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೆ ಶತೃ ರಾಷ್ಟ್ರದಿಂದ ದಾಳಿ ನಡೆದ ಸಂದರ್ಭದಲ್ಲಿ ನಾಗರೀಕ ರಕ್ಷಣಾ ಕಾರ್ಯವನ್ನು ಕೈಗೊಳ್ಳುವ ಕುರಿತು ಅಣಕು (ಮಾಕ್ ಡ್ರಿಲ್) ಪ್ರದರ್ಶನ ನಡೆಸಲಾಯಿತು.

ಕೇಂದ್ರ ಗೃಹ ಇಲಾಖೆ ಸೂಚನೆ ಮೇರೆಗೆ ದೇಶದಲ್ಲಿ ಭದ್ರತೆ ದೃಷ್ಟಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ನಗರದ ಅರಮನೆ ಆವರಣದಲ್ಲಿ ಶನಿವಾರ ಸಿಐಎಸ್‌ಎಫ್ ಕಮಾಂಡೋ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಮಾಕ್ ಡ್ರಿಲ್ ನಡೆಸಿ ಸಾರ್ವಜನಿಕರ ರಕ್ಷಣೆಗೆ ನಾವಿದ್ದೇವೆ ಎಂಬ ಸಂದೇಶ ನೀಡಿದರು. ಪೊಲೀಸ್ ಇಲಾಖೆ, ಸಿಐಎಸ್‌ಎಫ್, ಹೋಂ ಗಾರ್ಡ್, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಕಾರ್ಪೋರೇಷನ್, ಫೊರೆನ್ಸಿಕ್ ತಂಡ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಭಾಗವಹಿಸಿ ನಾಗರೀಕರ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ ನಡೆಸಿದರು.

ಅರಮನೆ ಆವರಣದ ಜಯಮಾರ್ತಾಂಡ ದ್ವಾರದ ಒಳಗೆ ತೆಂಗಿನಗರಿಯ ಶೆಡ್ ಹಾಕಿ ಎದುರಾಳಿ ದಾಳಿಯಿಂದ ಮಿಸೆಲ್ಸ್‌ಗಳು ಕೆಳಕ್ಕೆ ಬಿದ್ದು ಹಾನಿಯುಂಟು ಮಾಡಿದಾಗ ಬೆಂಕಿ ಹತ್ತಿಕೊಂಡು ನಂತರ ಆ ಭಾಗದಲ್ಲಿ ಸಾರ್ವಜನಿಕರನ್ನು ರಕ್ಷಣೆ ಮಾಡುವ ಸಂಬಂಧ ಯಾವ, ಯಾವ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಹೇಗೆ ಅಗ್ನಿ ಶಾಮಕ ದಳ ಕಾರ್ಯವಹಿಸಲಿದೆ ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆ ಕೈಗೊಳ್ಳುವ ಕುರಿತು ಅಣಕು ಪ್ರದರ್ಶನ ನಡೆಸಲಾಯಿತು. ಬಾಂಬ್ ದಾಳಿಗೆ ಒಳಗಾಗಿ ಸಾರ್ವಜನಿಕರು ಅಪಘಾತಕ್ಕೀಡಾದ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಕ್ರಮಗಳು ಪೊಲೀಸರ ಧೈರ್ಯ, ಸಿಐಎಸ್‌ಎಫ್ ಸಿಬ್ಬಂದಿಗಳ ದಾಳಿ ಮತ್ತು ಜಿಲ್ಲಾಡಳಿತ ಕೈಗೊಳ್ಳುವ ತುರ್ತು ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮನನ ಮಾಡಿಕೊಡಲಾಯಿತು.

ಎದುರಾಳಿಗಳ ಎಂತಹ ಕಠಿಣ ದಾಳಿಗೂ ನಾವು ತಕ್ಕ ಉತ್ತರ ನೀಡಲಿದ್ದೇವೆ ಎಂಬ ಸಂದೇಶ ನೀಡುವ ಜೊತೆಗೆ ಸಾರ್ವಜನಿಕರು ಗಾಯಗೊಂಡ ನಂತರ ಅವರುಗಳನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಬಗ್ಗೆ ಅಣಕು ಪ್ರದರ್ಶನ ನಡೆಯಿತು. ಈ ಕಾರ್ಯಕ್ಕೆ ೮ ಆಂಬುಲೆನ್ಸ್ ೩೨ ಆರೋಗ್ಯ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿದ್ದು, ಜಿಲ್ಲಾಸ್ಪತ್ರೆ ಮತ್ತು ಸ್ಥಳೀಯವಾಗಿ ಇರುವ ಪಿ.ಎಚ್.ಸಿ.ಗಳಿಗೆ ರೋಗಿಗಳನ್ನು ಕರೆದೊಯ್ದು ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಧಿಕಾರಿ ಡಾ.ಕುಮಾರಸ್ವಾಮಿ ತಿಳಿಸಿದರು.

೩೦೦ಕ್ಕೂ ಹೆಚ್ಚು ಪೊಲೀಸರು ಸಿಬ್ಬಂದಿಗಳು, ೭೦ಕ್ಕೂ ಹೆಚ್ಚು ಸಿ.ಐ.ಎಸ್.ಎಫ್ ತಂಡ, ಆರೋಗ್ಯ ಇಲಾಖೆ, ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್, ನಗರಪಾಲಿಕೆ, ಅಗ್ನಿಶಾಮಕ, ಕಂದಾಯ ಇಲಾಖೆಗಳ ಸಹೋಗದೊಂದಿಗೆ ಈ ಅಣಕು ಪ್ರದರ್ಶನ ನಡೆಯಿತು. ಈ ಪ್ರದರ್ಶನದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಎಡಿಸಿ ಡಾ.ಪಿ.ಶಿವರಾಜು, ನಗರ ಪೊಲೀಸ್ ಅಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿಸಿಪಿಗಳಾದ ಮುತ್ತುರಾಜ್, ಸುಂದರ್ ರಾಜ್, ಎಸಿಪಿಗಳಾದ ಶಿವಶಂಕರ್, ರಾಜೇಂದ್ರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಕೆ.ಆರ್.ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ನಯಾಜ್ ಅಹಮದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ, ಡಾ.ಪುಟ್ಟತಾಯಮ್ಮ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.