ಮೈಸೂರು : ಕೇಂದ್ರ ಗೃಹ ಸಚಿವಾಲಯ ಮಾಕ್ ಡ್ರಿಲ್ ಸೂಚನೆಯ ಹಿನ್ನೆಲೆಯಲ್ಲಿ ಮೇ ೧೦ ರಂದು ಸಂಜೆ ೪ ಗಂಟೆಗೆ ಅರಮನೆ ಆವರಣದಲ್ಲಿ ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೇ ೧೦ ರಂದು ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್‌ನ್ನು ಅರಮನೆ ಆವರಣದಲ್ಲಿ ಸಂಜೆ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಮಾಕ್ ಡ್ರಿಲ್‌ಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾಕ್ ಡ್ರಿಲ್ ವ್ಯವಸ್ಥಿತವಾಗಿ ಮಾಡಬೇಕು. ಇದಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ವ್ಯವಸ್ಥೆ ಮಾಡಬೇಕು. ಅಗತ್ಯ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಅರಮನೆ ಆವರಣದಲ್ಲಿ ಮಾಕ್ ಡ್ರಿಲ್ ಮಾಡಲು ಸೂಕ್ತವಾದ ಸ್ಥಳವನ್ನು ಗುರುತಿಸಿಕೊಳ್ಳಿ, ಎಲ್ಲಾ ರೀತಿಯ ವ್ಯವಸ್ಥೆ, ಕಂಟ್ರೋಲ್ ರೂಂ, ಫೈರ್ ಇಂಜಿನ್ ವ್ಯವಸ್ಥೆ, ಆಂಬುಲೆನ್ಸ್ ವ್ಯವಸ್ಥೆ, ಹಾಸ್ಪಿಟಲ್ ವ್ಯವಸ್ಥೆ ಈ ರೀತಿ ಎಲ್ಲಾ ರೀತಿಯ ವ್ಯವಸ್ಥೆ ಇರಬೇಕು. ಮಾಕ್ ಡ್ರಿಲ್ ವ್ಯವಸ್ಧಿತವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಅಪರ ಜಿಲ್ಲಾಧಿಕಾರಿಗಳಾದ ಡಾ.ಪಿ. ಶಿವರಾಜು, ಡಿಸಿಪಿ ಮುತ್ತುರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.














