ಮನೆ ರಾಜ್ಯ ಮೈಸೂರು ದಸರಾ ಉತ್ಸವದಲ್ಲಿ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ

ಮೈಸೂರು ದಸರಾ ಉತ್ಸವದಲ್ಲಿ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ

0

ಭಾರತೀಯ ಪರಂಪರೆಯು ಅನಾದಿ ಕಾಲದಿಂದಲೂ ಆಧ್ಯಾತ್ಮಿಕ, ತತ್ವಶಾಸ್ತ್ರ, ವೈಚಾರಿಕತೆ, ನಂಬಿಕೆ, ಶ್ರದ್ಧೆಗಳನ್ನೊಳಗೊಂಡ  ಸಂಸ್ಕೃತಿಯೆಂಬ ಮೂಲಸ್ರೋತ್ರದಿಂದ ಹರಿದುಬಂದಿದೆ. ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದ ಶಿಲ್ಪ ಶಾಸ್ತ್ರಗಳ, ಆಗಮಗಳ ಆಧಾರದಲ್ಲಿ ಹಲವು ಪೂಜಾ ಪದ್ಧತಿಗಳು ಹಾಗೂ ದೇವಾಲಯ ವಾಸ್ತುಶಿಲ್ಪಗಳು ವಿವಿಧ ಆಯಮಗಳಲ್ಲಿ ಮೂರ್ತಗೊಂಡವು. ಅವು ಕ್ರಿ. ಶ.ಆರನೆಯ ಶತಮಾನದ ನಂತರ ಶಿಲಾ ಮಾಧ್ಯಮದಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಶೈಲಿಯಲ್ಲಿ ನಿರ್ಮಾಣಗೊಂಡವು.

Join Our Whatsapp Group

ಕರ್ನಾಟಕದಲ್ಲಿ ಚಾಲುಕ್ಯ, ರಾಷ್ಟ್ರಕೂಟ ಹಾಗೂ ಹೊಯ್ಸಳರ ಕಾಲಘಟ್ಟದಲ್ಲಿ, ಅಂದರೆ ಕ್ರಿ. ಶ. 6-14 ನೇ  ಶತಮಾನದವರೆಗೆ ಸುಮಾರು 800 ವರ್ಷಗಳಲ್ಲಿ ವೇಸರ ಅಥವಾ ಕರ್ಣಾಟ ದ್ರಾವಿಡ ಎಂದು ಕರೆಯಲ್ಪಡುವ ಒಂದು ವಿಶಿಷ್ಟ ಶೈಲಿಯುಲ್ಲಿ ದೇವಾಲಯ ಶಿಲ್ಪವು ವಿಕಸಿತಗೊಂಡಿತು. ಹೊಯ್ಸಳರ ಕಾಲದಲ್ಲಿ (11 ರಿಂದ 14 ನೇ ಶತಮಾನ) ಈ ಶೈಲಿಯುಲ್ಲಿ ರಚಿತಗೊಂಡ ದೇವಾಲಯಗಳು  ತಮ್ಮ ವಿನ್ಯಾಸ, ಆಕಾರ, ಅಲಂಕರಣ ಮತ್ತು  ಕಲಾ ನೈಪುಣ್ಯತೆದಲ್ಲಿ ಪರಾಕಷ್ಟೆಯನ್ನು ತಲುಪಿದ್ದು  ಹೊಯ್ಸಳ ದೇವಾಲಯಗಳೆಂದು ಪ್ರಸಿದ್ಧವಾಗಿದೆ. ಈ ಕಾಲಘಟ್ಟದಲ್ಲಿ ಹಲವು ಚಿಕ್ಕ ದೊಡ್ಡ ದೇವಾಲಯಗಳು ನಿರ್ಮಾಣಗೊಂಡಿದ್ದು, ಬೇಲೂರಿನ ಚೆನ್ನಕೇಶ್ವರ, ಹಳೆಬೀಡಿನ ಹೊಯ್ಸಳೇಶ್ವರ, ಸೋಮನಾಥಪುರದ  ಕೇಶವ ದೇವೆಯಾಲಯಗಳು ಜಗತ್ಪ್ರಸಿದ್ಧವಾಗಿವೆ.

ಕ್ರಿ. ಶ. 14 ನೆಯ ಶತಮಾನದಲ್ಲಿ ಹೊಯ್ಸಳ ಶೈಲಿಯಿ ಲುಪ್ತವಾಗಿದ್ದು, ಅಲ್ಲಿಂದ ಈಚೆಗೆ ಅಂದರೆ ಸುಮಾರು 700 ವರ್ಷಗಳಿಂದ ಯಾವುದೇ ದೇವಾಲಯವು ವೇಸರ ಅಥವಾ ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡಿರುವುದಿಲ್ಲ.

ಪ್ರಸ್ತುತ ಆಧುನಿಕ ಆಕರ ಗ್ರಂಥ ಹಾಗೂ ಪ್ರಾಚೀನ ಶಾಸ್ತ್ರ ಗ್ರಂಥಗಳ ಕೂಲಂಕುಷ ಅಧ್ಯಯನದೊಂದಿಗೆ ಹೊಯ್ಸಳ ದೇವಾಲಯಗಳ  ತುಲನಾತ್ಮಕ ವಿಶ್ಲೇಷಣೆ ಮಾಡಿ 7 ಅಡಿ ಎತ್ತರದ ಹೊಯ್ಸಳ ದೇವಾಲಯದ ಮಾದರಿ ನಿರ್ಮಾಣದ ಪ್ರಯತ್ನವನ್ನು ಮಾಡಲಾಗಿದೆ. ಸೀಮಿತ ಸಂಪನ್ಮೂಲ ಹಾಗೂ ಸಮಯದಲ್ಲಿ ಹೊಯ್ಸಳ  ವಾಸ್ತು ಶೈಲಿಯ ಪ್ರಮುಖ ಅಂಶಗಳನ್ನು ಅಳವಡಿಸಿ ಮಹಾಗನಿ ಮರ ಮತ್ತು plywoodಬಳಸಿ ರಚಿಸಲಾಗಿದೆ.

ಹೊಯ್ಸಳ ದೇವಾಲಯಗಳಲ್ಲಿ ಪ್ರಮುಖವಾಗಿ ನಾಲ್ಕು ಭಾಗಗಳಿರುತ್ತವೆ. (1)ಗರ್ಭಗೃಹ;(2)ಶುಕನಾಸಿ; (3)ನವರಂಗ; (4)ಮಂಟಪ.

ಹಾಗೂ ಹಲವು ಬಾರಿ 2, 3, 4 ಅಥವಾ 5 ಗರ್ಭಗೃಹಗಳನ್ನು ಹೊಂದಿರುತ್ತದೆ; ಆಗ ಅವುಗಳನ್ನು ದ್ವಿಕೂಟ, ತ್ರಿಕೂಟ, ಚತುಷಕೂಟ, ಪಂಚಕೂಟ ಎಂದು ಕ್ರಮವಾಗಿ ಕರೆಯುತ್ತಾರೆ.ಸಾಧಾರಣವಾಗಿ ಗರ್ಭಗೃಹ ಚೌಕ ಅಥವಾ ನಕ್ಷತ್ರಕಾರದ ತಲ ವಿನ್ಯಾಸವನ್ನು ಹೊಂದಿರುತ್ತದೆ. ಚೌಕ ವಿನ್ಯಾಸವು ಹಿಂಬಣೆ, ಮುಂಬಣೆಗಳನ್ನು ಹೊಂದಿದ್ದು ವಿಪುಲ ಅಲಂಕಾರಕ್ಕೆ ಅವಕಾಶ ಮಾಡಿ ಕೊಟ್ಟಿದೆ.ಒಟ್ಟಾಗಿ ವಿನ್ಯಾಸ ಮತ್ತು ಯೋಜನೆಯಲ್ಲಿ ಸಂಕೀರ್ಣವಾಗಿದ್ದು ಆಕರ್ಷಕವಾಗಿ ಮೂಡಿ ಬಂದಿರುತ್ತದೆ.

ಇದರ ಊರ್ಧ್ವಚ್ಛಂದದಲ್ಲಿ  (Elevation) ಕೆಲವು ವರ್ಗಗಳನ್ನು ಹೀಗೆ ಗುರುತಿಸಬಹುದು

1.    ಜಗತಿ; ದೇವೇಲಾಯಗಳು ಎತ್ತರದ ಜಗತಿಯ ಮೇಲೆ ನಿಂತಿರುತ್ತವೆ. ಇದು ಪ್ರದಕ್ಷಿಣ ಪಥವಾಗಿ ಬಳಸಲ್ಪಡುತ್ತದೆ.

2.    ಪೀಠ; ಜಗತಿಯ ಮೇಲೆ ಅಡ್ಡ ಪಟ್ಟಿಕೆಗಳ ಅಲಂಕರಣವುಳ್ಳ ಪೀಠವಿರುತ್ತದೆ.

3.    ಜಂಘ; ಪೀಠದ ಮೇಲೆಯಿರುವ ಗೋಡೆಯನ್ನು ಜಂಘ ಎಂದು ಕರೆಯುತ್ತಾರೆ. ಕೂಟಛಾದ್ಯ ಎಂಬ ಮುಂಚಾಚು ಗೋಡೆಯನ್ನು ಜಂಘ ಮತ್ತು ಉಪರಿ ಜಂಘ ಎಂದು ವಿಂಗಡಿಸುತ್ತದೆ. ಜಂಘವು ಮೂರ್ತಿ ಶಿಲ್ಪದಿಂದಲೂ ಉಪರಿ ಜಂಘವು  ಪಂಜರಗಳಿಂದ ಅಲಂಕೃತಗೊಂಡಿರುತ್ತದೆ.

4.    ಛಾದ್ಯ; ವಿಶಾಲವಾದ ಮುಂಚಾಚು ಇರುವ ಸ್ತರ. ಇದು ಜಂಘ ಮತ್ತು ಶಿಖರವನ್ನು ವಿಂಗಡಿಸುತ್ತದೆ.

5.    ಶಿಖರ; ಛಾದ್ಯದ ಮೇಲಿನ ಶಿಖರವು ಹಲವು ಅಂತಸ್ತು ಅಥವಾ ಭೂಮಿಗಳನ್ನು ಹೊಂದಿರುತ್ತದೆ. ಇಲ್ಲಿಯ ವಿಶೇಷ ಅಲಂಕಾರಣವು ಅಂತಸ್ತುಗಳನ್ನು ಗುರುತಿಸುವ ರೇಖೆಗಳನ್ನು ಮುಚ್ಚಿತ್ತವೆ.

6.    ಕಂಠ/ಗಲ; ಶಿಖರ ಮತ್ತು ಘಂಟಾ ರಚನೆಯ ನಡುವೆ ಕಿರದಾದ ಕಂಠ ಅಥವಾ ಗಲ ಎಂಬ ವರ್ಗವಿರುತ್ತದೆ. 

7.    ಘಂಟಾ; ಶಿಖರದ ಮೇಲೆ ಘಂಟಾ ರಚನೆಯಿದ್ದು ಅದರ ಮೇಲ್ತುದಿಯಲ್ಲಿ ಅತಿ ಸುಂದರವಾದ ಕಲ್ಲಿನ ಕಲಶವಿರುತ್ತದೆ.

 ಹೀಗೆ  ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಕ್ರಮಭದ್ದವಾದ ಅಲಂಕರಣ, ಅಂಗಾಂಗ ಪ್ರಮಾಣ, ಬೇರೆ ಬೇರೆ ಭಾಗಗಳಲ್ಲಿರುವ ಸಂತುಲನ, ಯೋಜನಬದ್ದವಾದ ವಿನ್ಯಾಸಗಳಿಂದ ಹೊಯ್ಸಳ ದೇವಾಲಯವು ಅತ್ಯದ್ಭುತ ಸೌಂದರ್ಯದ ಆಗರವಾಗಿ ರೂಪಿತಗೊಂಡಿದೆ.

ಕ್ರಿ. ಶ.12-14 ನೆಯ ಶತಮಾನದವರೆಗೆ ಪ್ರವರ್ಧಮಾನಕ್ಕೆ ಬಂದಿದ್ದ ಈ  ಹೊಯ್ಸಳ ದೇವಾಲಯ ಶೈಲಿಯು, ಹೊಯ್ಸಳ ಸಾಮ್ರಾಜ್ಯದ ಪತನದೊಂದಿಗೆ  ಲುಪ್ತವಾಗಿ ಹೋಯಿತು. ಹಾಗೂ ಸುಮಾರು 800 ವರ್ಷಗಳಿಂದೀಚೆಗೆ ಈ ಶೈಲಿಯಲ್ಲಿ ಯಾವುದೇ ದೇವಾಲಯವು ನಿರ್ಮಾಣವಾಗಿರುವುದು ಕಂಡು ಬಂದಿರುವುದಿಲ್ಲ. ಪ್ರಸ್ತುತ ಆರ್ಕಿಟೆಕ್ಟ್ ಮೈತ್ರೇಯೀ 7 ಅಡಿ ಎತ್ತರದ ಹೊಯ್ಸಳ ದೇವಾಲಯದ ಮಾದರಿಯನ್ನು ಮರದಲ್ಲಿ ರಚಿಸುವ ವಿನಮ್ರ ಪ್ರಯತ್ನವನ್ನು ಮಾಡಿದ್ದಾರೆ. ಸದ್ಯಕ್ಕೆ 7’ಎತ್ತರ, 7’ಅಗಲ ಹಾಗೂ 7’ ಉದ್ದವಿರುವ ಗರ್ಭಗೃಹ ಮತ್ತು ಶುಕನಾಸಿಯ ಭಾಗದ ರಚನೆಯನ್ನು ಮಾಡಿದ್ದು, ನವರಂಗ ಮತ್ತು ಮಂಟಪಗಳನ್ನು ರಚಿಸಿ ಜೋಡಿಸಲಾಗುವುದು. 

ಮಾದರಿಯ ಪೂರ್ಣ ಹಂತದಲ್ಲಿ ಒಟ್ಟು 9’x 11’ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ ಮಾದರಿಯನ್ನು ಶಿಲ್ಪಾಶಾಸ್ತ್ರದ ಅಳತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿರುತ್ತದೆ. ಪ್ರಸ್ತುತ ಮೈಸೂರು ದಸರಾ ಉತ್ಸವದಲ್ಲಿ ಪ್ರದರ್ಶನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ.