ಪಾಟ್ನಾ : ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಆ ಎರಡೂ ಪಕ್ಷಗಳು “ನೀರು ಮತ್ತು ಎಣ್ಣೆಯಂತೆ” ಎಂದು ಟೀಕಿಸಿದ್ದಾರೆ. ಮಹಾಘಟಬಂಧನ್ ಮೈತ್ರಿದಾರರ ನಡುವೆ ಆಳವಾದ ಆಂತರಿಕ ಬಿರುಕುಗಳಿವೆ. ಅಧಿಕಾರದ ದುರಾಸೆಯಿಂದ ಎರಡೂ ಪಕ್ಷಗಳು ಒಗ್ಗಟ್ಟಾಗಿರುವಂತೆ ನಾಟಕವಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರನ್ನು ಗುರಿಯಾಗಿಸಿಕೊಂಡ ಪಿಎಂ ಮೋದಿ, ಅವರಿಬ್ಬರನ್ನು ಭ್ರಷ್ಟಾಚಾರದ ಯುವರಾಜರು ಎಂದು ಟೀಕಿಸಿದ್ದಾರೆ. ಬಿಹಾರವನ್ನು ಲೂಟಿ ಮಾಡಲು ಯಾವುದೇ ಬೆಲೆ ತೆತ್ತಾದರೂ ಅಧಿಕಾರವನ್ನು ಹಿಡಿಯಲು ಆರ್‌ಜೆಡಿ ಮತ್ತು ಕಾಂಗ್ರೆಸ್ ಕೈಜೋಡಿಸಿವೆ ಎಂದು ಮೋದಿ ಆರೋಪಿಸಿದರು. ಬಿಹಾರದ ಚುನಾವಣಾ ಯುದ್ಧದಲ್ಲಿ ತಮ್ಮನ್ನು ತಾವು ಯುವರಾಜ್ ಎಂದು ಪರಿಗಣಿಸುವ ಯುವರಾಜರ ಜೋಡಿ ಸುಳ್ಳು ಭರವಸೆಗಳ ಅಂಗಡಿಗಳನ್ನು ತೆರೆದಿದ್ದಾರೆ.
ಒಬ್ಬರು ಭಾರತದ ಅತ್ಯಂತ ಭ್ರಷ್ಟ ಕುಟುಂಬದ ಯುವರಾಜನಾದರೆ ಇನ್ನೊಬ್ಬರು ಬಿಹಾರದ ಅತ್ಯಂತ ಭ್ರಷ್ಟ ಕುಟುಂಬದ ಯುವರಾಜ. ಅವರಿಬ್ಬರೂ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಇಬ್ಬರೂ ನಿರಂತರವಾಗಿ ನನ್ನ ವಿರುದ್ಧ ನಿಂದನೆಗಳನ್ನು ಮಾಡುತ್ತಿದ್ದಾರೆ. ಆದರೆ ಇಂಥವರಿಂದ ನಾವು ಇನ್ನೇನು ನಿರೀಕ್ಷಿಸಬಹುದು? ನನ್ನ ಹೆಸರು ಜಪಿಸದಿದ್ದರೆ ಅವರಿಗೆ ಊಟ ಜೀರ್ಣವಾಗುವುದಿಲ್ಲ” ಎಂದು ಮೋದಿ ಲೇವಡಿ ಮಾಡಿದ್ದಾರೆ.
ವಿರೋಧ ಪಕ್ಷಗಳ ಮೈತ್ರಿಕೂಟವು ಹೀನಾಯಕರವಾದ ಸೋಲಿನತ್ತ ಸಾಗುತ್ತಿದೆ ಎಂದು ಸಮೀಕ್ಷೆಗಳು ತೋರಿಸಿವೆ. ಇದರಿಂದ ಹತಾಶರಾಗಿರುವ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ತಮ್ಮ ಪ್ರಣಾಳಿಕೆಯ ಮೂಲಕ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಾ, ವಿನಾಕಾರಣ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.
“ಛತ್ ಪೂಜೆಯ ನಂತರ ಇದು ನನ್ನ ಮೊದಲ ಬಿಹಾರ ಪ್ರವಾಸ. ಇದು ಈಗ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ಹಬ್ಬವು ಭಕ್ತಿಗಾಗಿ ಮಾತ್ರವಲ್ಲದೆ ಸಮಾನತೆಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಈ ಹಬ್ಬಕ್ಕೆ ನಮ್ಮ ಸರ್ಕಾರ ಯುನೆಸ್ಕೋ ಪರಂಪರೆಯ ಟ್ಯಾಗ್ ಪಡೆಯಲು ಪ್ರಯತ್ನಿಸುತ್ತಿದೆ. ಆದರೆ, ರಾಹುಲ್ ಗಾಂಧಿ ಛತ್ ಪೂಜೆಗೆ, ಜನರ ಭಕ್ತಿಗೆ ಅವಮಾನ ಮಾಡಿದ್ದಾರೆ. ಇದನ್ನು ನೌಟಂಕಿ, ನಾಟಕ ಎಂದು ಕರೆದಿದ್ದಾರೆ” ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.















