ಮನೆ ಸುದ್ದಿ ಜಾಲ ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ; ರಾಗಾ ಹೇಳಿಕೆಗೆ ಬಿಜೆಪಿ ತಿರುಗೇಟು

ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ; ರಾಗಾ ಹೇಳಿಕೆಗೆ ಬಿಜೆಪಿ ತಿರುಗೇಟು

0

ನವದೆಹಲಿ : ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ಮೋದಿ ಸರ್ಕಾರದಿಂದ ದಾಳಿ ನಡೆಯುತ್ತಿದೆ ಎಂದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ವಿದೇಶದಲ್ಲಿ ರಾಹುಲ್ ಗಾಂಧಿ ನೀಡಿರುವ ಕೆಲವು ಹೇಳಿಕೆಗಳು ಭಾರತದ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತವೆ ಎಂದು ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಇಂತಹ ಹೇಳಿಕೆ ಮೊದಲ ಬಾರಿಗೆ ನೀಡುತ್ತಿಲ್ಲ. 2017 ಮತ್ತು 2023ರ ನಡುವೆ ಕೊಲಂಬಿಯಾ ವಿಶ್ವವಿದ್ಯಾಲಯ, ಲಂಡನ್‌ನ ಚಾಥಮ್ ಹೌಸ್, ಸ್ಟ್ಯಾನ್‌ಫೋರ್ಡ್, ದುಬೈ, ಸಿಂಗಾಪುರ, ಮಲೇಷ್ಯಾ, ಬಹ್ರೇನ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ವಿರುದ್ಧ ಇಂತಹದೇ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇಂತಹ ಹೇಳಿಕೆಗಳು ಭಾರತ ವಿರೋಧಿ ಭಾವನೆಯನ್ನು ಪ್ರತಿಬಿಂಬಿಸುತ್ತವೆ. ಭಾರತದ ಸಮಸ್ಯೆಗಳಿಗೆ ಬ್ರಿಟಿಷರೇ ಕಾರಣ ಎಂದು 1931ರಲ್ಲಿ ಚಾಥಮ್ ಹೌಸ್‌ನಲ್ಲಿ ಮಹಾತ್ಮ ಗಾಂಧಿ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಅವರು, ಕೊಲಂಬಿಯಾ ಮತ್ತು ಸ್ಟ್ಯಾನ್‌ಫೋರ್ಡ್ನಂತಹ ಸಂಸ್ಥೆಗಳಲ್ಲಿ ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಗಳು ಸೂಕ್ತವೇ ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ತೀವ್ರ ಬಡತನವು 2.3% ಕ್ಕೆ ಇಳಿದಿದೆ ಎಂದು ತೋರಿಸುವ ಜುಲೈ 2025ರ ವಿಶ್ವ ಬ್ಯಾಂಕಿನ ವರದಿಯನ್ನು ಅವರು ಉಲ್ಲೇಖಿಸಿ, ಅಂತರರಾಷ್ಟ್ರೀಯ ಭೇಟಿಗಳ ಸಮಯದಲ್ಲಿ ರಾಹುಲ್ ಗಾಂಧಿ ಈ ಸಾಧನೆಗಳನ್ನು ಗುರುತಿಸಲು ಅಥವಾ ಪ್ರಶಂಸಿಸಲು ವಿಫಲರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಪರಂಪರೆಯು ವಿದೇಶಿ ಸಂಪರ್ಕಗಳ ಮೇಲೆ ಅವಲಂಬಿತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿಯವರು ವಿದೇಶದ ವೇದಿಕೆಗಳಲ್ಲಿ ಭಾರತ ಸರ್ಕಾರದ ನೀತಿಗಳನ್ನು ಟೀಕಿಸುವ ಮೂಲಕ ದೇಶದ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಇದು ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಭಾರತದ ಆಂತರಿಕ ವಿಷಯಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಡ್ಡಿವೆ ಎಂದು ಕಿಡಿಕಾರಿದ್ದಾರೆ.