ಚೆನ್ನೈ: ಮಾದಕ ವಸ್ತುಗಳ ಕಳ್ಳಸಾಗಣೆಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಡಿಎಂಕೆ ಮಾಜಿ ಪದಾಧಿಕಾರಿ ಜಾಫರ್ ಸಾದಿಕ್ ಮತ್ತು ಇತರರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಇಂದು (ಮಂಗಳವಾರ) ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಚೆನ್ನೈ, ಮಧುರೈ ಮತ್ತು ತಿರುಚಿರಾಪಳ್ಳಿಯ 25 ಕಡೆಗಳಲ್ಲಿ ಕೇಂದ್ರ ಅರೆಸೇನಾ ಪಡೆಯ ನೆರವಿನೊಂದಿಗೆ ಇ.ಡಿ ಶೋಧ ನಡೆಸಿದೆ.
ತಮಿಳು ಚಿತ್ರಗಳ ನಿರ್ಮಾಪಕರೂ ಆಗಿರುವ ಸಾದಿಕ್, ಚಿತ್ರ ನಿರ್ದೇಶಕ ಅಮೀರ್ ಸೇರಿದಂತೆ ಇತರರ ವಿರುದ್ದ ಕಾರ್ಯಾಚರಣೆ ನಡೆಸಲಾಗಿದೆ.
36 ವರ್ಷದ ಸಾದಿಕ್ ಅವರನ್ನು ಕಳೆದ ತಿಂಗಳು ಮಾದಕವಸ್ತು ನಿಯಂತ್ರಣ ಸಂಸ್ಥೆಯು (ಎನ್‌ಸಿಬಿ) ಬಂಧಿಸಿತ್ತು. ₹2,000 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 3,500 ಕೆ.ಜಿ. ‘ಸ್ಯೂಡೋಫೆಡ್ರಿನ್’ ಕಳ್ಳಸಾಗಣೆಯಲ್ಲಿ ಸಾದಿಕ್ ಭಾಗಿಯಾಗಿದ್ದಾನೆ ಎಂಬ ಆರೋಪವಿದೆ.
ಎನ್ ಸಿಬಿ ಹಾಗೂ ಇತರೆ ಪ್ರಕರಣಗಳ ಆಧಾರದಲ್ಲಿ ಸಾದಿಕ್ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿರುವ ಇ.ಡಿ ತನಿಖೆ ನಡೆಸುತ್ತಿದೆ. ಫೆಬ್ರುವರಿ ತಿಂಗಳಲ್ಲಿ ಮಾದಕವಸ್ತು ದಂದೆಯ ಆರೋಪದ ಬೆನ್ನಲ್ಲೇ ಸಾದಿಕ್ ಅವರನ್ನು ಪಕ್ಷದಿಂದ ಡಿಎಂಕೆ ಉಚ್ಚಾಟಿಸಿತ್ತು.