ಬೆಂಗಳೂರು (Bengaluru): ಇನ್ನೆರಡು ದಿನಗಳಲ್ಲಿ ಕರ್ನಾಟಕ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮುಂಗಾರು ಚುರುಕಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ( ಐಎಂಡಿ) ತಿಳಿಸಿದೆ.
ಮುಂಗಾರು ಪ್ರಗತಿಯಲ್ಲಿ ಯಾವುದೇ ವಿಳಂಬವಾಗಿಲ್ಲ. ಮುಂದಿನ ಎರಡು ದಿನಗಳಲ್ಲಿ ಮಹಾರಾಷ್ಟ್ರ ತಲುಪುವ ಸಾಧ್ಯತೆಯಿದ್ದು, ನಂತರದ ಎರಡು ದಿನಗಳಲ್ಲಿ ಮುಂಬೈ ಮಹಾನಗರವನ್ನೂ ಆವರಿಸುವ ಸಾಧ್ಯತೆ ಇದೆ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಆರ್.ಕೆ. ಜೆನಮಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಲವಾದ ಗಾಳಿ ಮತ್ತು ಮೋಡಗಳ ರಚನೆ ದಟ್ಟವಾಗುತ್ತಿದೆ. ಮುಂಗಾರು ಪ್ರಬಲವಾಗುವ ಲಕ್ಷಣಗಳಿವೆ. ಮೇ 31ರಂದು ಆರಂಭವಾದ ಮುಂಗಾರು ಜೂನ್ 7ರ ನಡುವೆ ದಕ್ಷಿಣ ಮತ್ತು ಮಧ್ಯ ಅರಬ್ಬಿ ಸಮುದ್ರ, ಕೇರಳದಾದ್ಯಂತ, ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳನ್ನು ಆವರಿಸಿತ್ತು. ಈ ಮಧ್ಯೆ ಇಡೀ ಈಶಾನ್ಯ ಭಾರತವನ್ನೂ ಆವರಿಸಿ, ಉತ್ತಮ ಮಳೆಯಾಗಿದೆ ಎಂದು ತಿಳಿಸಿದರು.