ʼಚಂದ್ರʼ ಎಂದರೆ ಯಾವುದೋ ಗ್ರಹವನ್ನು ಸುತ್ತುವ ಉಪಗ್ರಹವೆಂದು ಕರೆಯುತ್ತಾರೆ. ಅನೇಕ ಗ್ರಹಗಳಿಗೆ ಚಂದ್ರರಿದ್ದಾರೆ. ನಮಗೆ ಹತ್ತಿರದಲ್ಲಿ ಕಾಣುವ ಚಂದ್ರನೂ ಉಪಗ್ರಹವಾಗಿದ್ದಾನೆ.
ಭೂಮಿಗೆ ಸಮೀಪದ ಚಂದ್ರನನ್ನು ಜ್ಯೋತಿ ಶಾಸ್ತ್ರಜ್ಞರು ಪ್ರಮುಖ ಗ್ರಹವೆಂದು ತಿಳಿದು ಎರಡನೇ ಸ್ಥಾನ ಕೊಟ್ಟಿದ್ದಾರೆ. ವಿಶೇಷವಾಗಿ ರಾತ್ರಿಯಲ್ಲಿ ಭೂಮಿಗೆ ಚಂದ್ರನು ಪ್ರಕಾಶ ನೀಡುವನು. ತಂಪಾದ ಚಂದ್ರ ಪ್ರಕಾಶವು ಅಮೃತಮಯವೆನಿಸಿರುವುದು. ರಾತ್ರಿಯ ಅಧಿಪತಿಯಾದ ಚಂದ್ರನು ಸೂರ್ಯ ಪ್ರಕಾಶವನ್ನು ಪ್ರತಿಫಲಿಸುತ್ತಾನೆ.
ಖಗೋಳ ಶಾಸ್ತ್ರದಲ್ಲಿ ತಿಳಿಸಿದಂತೆ ಚಂದ್ರನು ಬೇರೆ ಗ್ರಹಗಳಂತೆ ಸೂರ್ಯನನ್ನು ಸ್ವತಂತ್ರವಾಗಿ ಸುತ್ತುವುದಿಲ್ಲ. ಅವನು ಭೂಮಿಯನ್ನು ಸುತ್ತುತ್ತಾ ಸೂರ್ಯನನ್ನು ಸಹ ಸುತ್ತುವನು.
ಚಂದ್ರನ ಚಲನೆಯ ಕೇಂದ್ರ ಬಿಂದು ಭೂಮಿಯ ಆಗಿರುವುದು. ಚಂದ್ರನು ಭೂಮಿಯನ್ನು ಒಂದು ಸಲ ಸುತ್ತಿ ಬರಲು 27 ದಿನಗಳು ಬೇಕಾಗುತ್ತದೆ.
ಚಂದ್ರನು ಭೂಮಿಯಿಂದ 2 ಲಕ್ಷ 38 ಸಾವಿರ ಮೈಲುಗಳಷ್ಟು ದೂರದಲ್ಲಿದ್ದಾನೆ. ವೇಗವಾಗಿ ಚಲಿಸುವ ಭೂಮಿಯ ಸನಿಹದ ನೆರೆಯವ ನೆನೆಸಿದ್ದಾನೆ. ಎರಡು ದಿನ ಆರು ತಾಸುಗಳಲ್ಲಿ ಒಂದು ರಾಶಿಯನ್ನು ದಾಟಿ ಹೋಗುತ್ತಾನೆ. ಭೂಮಿಗೆ ಬೆಳಕನ್ನು ನೀಡುವ ಗ್ರಹಗಳಲ್ಲಿ ಚಂದ್ರ ಎರಡನೆಯ ಗ್ರಹವಾಗಿದ್ದಾನೆ. ಚಂದ್ರನು ಸೂರ್ಯನ ಪ್ರಕಾಶವನ್ನು ಅಮೃತಮಯವಾಗಿ ಭೂಮಿಗೆ ಕಳಿಸುತ್ತಾನೆ. ಚಂದ್ರನಿಗೆ ಭಾರತೀಯರು “2” ಅಂಕ ನೀಡಿದ್ದಾರೆ. ಪಾಶ್ಚಾತ್ಯರು “7” ಅಂಕ ನೀಡಿದ್ದಾರೆ.
ನಮ್ಮ ಸೌರಮಂಡಲದಲ್ಲಿ ಸೂರ್ಯನ ನಂತರದ ಪ್ರಭಾವಿ ಗ್ರಹವೆಂದರೆ ಚಂದ್ರ. ಭೂಮಿಯ ನೀರಿನ ಕ್ಷೇತ್ರವು ಚಂದ್ರನ ಪ್ರಭಾವ ಹೊಂದಿದೆ. ಚಂದ್ರನ ಮೇಲೆ ಕಾಲಿಟ್ಟ ಮಾನವನ ಉಪಗ್ರಹಗಳಿಂದ ಅನೇಕ ಬಾರಿ ಚಂದ್ರನೊಂದಿಗೆ ಪ್ರಯಾಣ ಮಾಡಿದ್ದಾನೆ. ಮೊದಲ ಬಾರಿಗೆ 1969ರಲ್ಲಿ ʼಅಪೋಲೋʼ ಉಪಗ್ರಹ ನೌಕೆಯು ಚಂದ್ರನಲ್ಲಿ ಇಳಿಯಿತು. ಅಲ್ಲಿನ ಮಣ್ಣು, ವಾತಾವರಣ ಮತ್ತು ಭೌತಿಕ ಸ್ಥಿತಿಗತಿಗಳನ್ನು ತಿಳಿಯಲು ಪ್ರಯತ್ನಿಸಿದ ಮಾನವನು ಅಲ್ಲಿಂದಲೂ ಅಂತರಿಕ್ಷದ ಬಗೆಗೆ ಶೋಧನೆ ಮಾಡಲು ಪ್ರಯತ್ನ ಮುಂದುವರಿಸಿದ್ದಾನೆ.
ವಿಜ್ಞಾನಿಗಳು ಚಂದ್ರಗ್ರಹದಲ್ಲಿ ಕೇವಲ ನಿಸ್ಸಾರವಾದ ಪ್ರದೇಶವಿದೆ, ಅಲ್ಲಿ ಯಾವುದೇ ರೀತಿಯ ವಾಯುಮಂಡಲವಿಲ್ಲ. ನೀರು, ಸಸ್ಯ ಯಾವುವು ಇಲ್ಲ. ವಿಶಾಲವಾದ ಮೈದಾನ ಹಾಗೂ ಬೃಹದಾಕಾರದ ಪರ್ವತಗಳು ಮಾತ್ರ ಕಂಡುಬಂದಿದೆ. ಭೂಮಿಯ ಗುರುತ್ವಾಕರ್ಷಣ ಶಕ್ತಿಗಿಂತ ಐದು ಪಟ್ಟು ಕಡಿಮೆ ಶಕ್ತಿ ಚಂದ್ರಗ್ರಹಕ್ಕಿದೆ. ಆದುದರಿಂದ ಅಲ್ಲಿ ಮಾನವರು ಸರಿಯಾಗಿ ನಡೆಯಲಾರ. ಆದುದರಿಂದ ಅಲ್ಲಿ ಯಾವುದೇ ಜೀವರಾಶಿ ಬಗ್ಗೆ ಕಲ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಭೂಮಿಯ ಮೇಲೆ ಬೀಳುವ ಚಂದ್ರ ಪ್ರಕಾಶವು ಹೆಚ್ಚುಕಡಿಮೆ ಆಗುತ್ತಿರುವದು. ಇದಕ್ಕೆ ಕಾರಣವೇನೆಂದರೆ ಚಂದ್ರನು ಸದಾ ಚಲನಶೀಲ ನಾಗಿರುವುದಾಗಿದೆ. ಚಂದ್ರನು ಸೂರ್ಯನ ಕಡೆಗೆ ಹೋದಾಗ ಪ್ರಕಾಶ ಕಡಿಮೆಯಾಗುವುದು. ಅತ್ಯಂತ ಸನಿಹದಲ್ಲಿದ್ದಾಗ ಏನು ಕಾಣಿಸದಂತಾಗುವುದು. ಆ ದಿನವನ್ನು ಅಮಾವಾಸ್ಯೆ ಎನ್ನುವರು. ಸೂರ್ಯನಿಂದ ಚಂದ್ರ ದೂರ ಹೋದಂತೆ ಪ್ರಕಾಶಮಾನವಾಗಿ ಕಾಣುವನು. ಅತ್ಯಂತ ಪ್ರಕಾಶಮಾನವಾಗಿರುವ ದಿನವನ್ನು ಹುಣ್ಣಿಮೆ ಎಂದಿದ್ದಾರೆ. ಈ ರೀತಿ ಯಾಗುವುದಕ್ಕೆ 15 ದಿನಗಳು ಬೇಕಾಗುತ್ತದೆ. ಹೀಗೆ 30 ದಿನಗಳಿಗೊಮ್ಮೆ ಪೂರ್ಣಚಂದ್ರ ದರ್ಶನವಾಗುತ್ತದೆ.
ಚಂದ್ರನ ಸಂರಚನೆಯ ವಿಷಯದಲ್ಲಿ ವಿಜ್ಞಾನಿಗಳು ಈ ರೀತಿಯಾಗಿ ಅಭಿಪ್ರಾಯ ಪಟ್ಟಿದ್ದಾರೆ. ಚಂದ್ರನಲ್ಲಿಯೂ ಸಹ ಭೂಮಿಯಲ್ಲಿರುವಂತೆ ಗ್ಯಾಸ್ ನಂತಹ ವಸ್ತು ಇತ್ತು. ಅದು ಶೀತಲವಾಗುತ್ತಾ ಹೋಗಿ ಪೃಥ್ವಿಯ ಅಧೀನವಾಯಿತು. ಚಂದ್ರನು ಮೊದಲು ಭೂಮಿಯ ಭಾಗವೇ ಆಗಿತ್ತು ಎಂದು ತಿಳಿಸಿದ್ದಾರೆ.
ಚಂದ್ರನು ಭೂಮಿಯಿಂದ ಬೇರೆಯಾದರೂ ಭೂಮಿಯ ಗುರುತ್ವಾಕರ್ಷಣ ಶಕ್ತಿಯಿಂದ ದೂರವಾಗದೆ ತಿರುಗುತ್ತಿದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಸೂರ್ಯನ ಉತ್ಪತ್ತಿಯಾದಂತೆಯೇ ಚಂದ್ರನ ಉತ್ಪತ್ತಿಯಾಯಿತೆನ್ನುವವರೂ ಇದ್ದಾರೆ. ಪುರಾಣಗಳಲ್ಲಿ ಕ್ಷೀರಸಾಗರ ಮಂಥನ ಕಾಲದಲ್ಲಿ ಉತ್ಪತ್ತಿಗೊಂಡ 14 ರತ್ನಗಳಲ್ಲಿ ಚಂದ್ರ ಸಹ ಒಂದೆಂದು ಹೇಳಲಾಗಿದೆ. ದೇವತೆಗಳು ಭೂಮಿಯ ಉದ್ಧಾರಕ್ಕಾಗಿ ಇದನ್ನು ಉಪಯೋಗಿಸಿದ್ದಾರೆ ಎನ್ನಲಾಗಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನ ಮಹತ್ವ :-
ಸೂರ್ಯನಿಗೆ ಹೋಲಿಸಿದರೆ ಚಂದ್ರನ ಗತಿಯು ತೀವ್ರವಾಗಿರುವುದು. ತನ್ನ ಮನಸ್ಸಿನ ವೇಗದಂತೆ ನಡೆದು ಎಲ್ಲಾ ನಕ್ಷತ್ರಗಳಿಗಿಂತ ಮುಂದೆ ಚಲಿಸುತ್ತಿರುವುದು ಚಂದ್ರನ ಒಂದು ವಿಶೇಷವಾಗಿದೆ. ಆದುದರಿಂದಲೇ “ಚಂದ್ರಮಾ ಮನಸೇ ಜಾತಃ” ಎಂದು ವೇದದಲ್ಲಿ ಹೇಳಿದ್ದಾರೆ. ಪಾಶ್ಚಾತ್ಯ ಕವಿ ಬಾಯರನು ಚಂದ್ರನನ್ನು “ಆಕಾಶದ ರಾಣಿ” ಎಂದು ಕರೆದಿದ್ದಾನೆ. ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರನಿಗೆ 11 ಹೆಸರುಗಳಿವೆ. ನಿಶಾಪತಿ, ಶೀತಕರ, ಉಡುಪತಿ, ಗ್ಲೌ, ಮೃಗಾಂಕ, ಇಂದು, ವಿಧು, ಸೋಮ, ನಿಶಿಥಿ ನಾಥ, ಚಂದ್ರ, ಶೀತಾಂಶು ಇತ್ಯಾದಿ ಹೆಸರುಗಳು ಚಂದ್ರನ ಒಂದೊಂದು ವಿಶೇಷ ಗುಣವನ್ನು ವಿವರಿಸುತ್ತದೆ.
ಚಂದ್ರನ ಜಾತಿ ವೈಶ್ಯ, ಸ್ವಭಾವ ಸದಾ ಗತಿಶೀಲವಾದುದಾಗಿದೆ. ಮಧುರ ಮೂರ್ತಿ ಅಧಿಪತಿಯಾದ ಚಂದ್ರ ಸುಂದರ ಮುಖ, ಕಣ್ಣು ಹೊಂದಿದ್ದಾನೆ. ಕಪ್ಪು, ಕಲೆಗಳು ಕೂಡ ಸುಂದರ ಶಶಿಧರನಿಗೆ ಅಂಟಿಕೊಂಡಿವೆ. ಚಂಚಲ ಸ್ವಭಾವದವನಾಗಿ ಸದ್ಗುಣ ಪ್ರಧಾನವಾಗಿ ಗೌರವವರ್ಣ ಹೊಂದಿದ ಚಂದ್ರನು ಸ್ತ್ರೀ ಗ್ರಹವೆನಿಸಿದ್ದಾನೆ.
ಸಮುದ್ರ ಜಲಾಶಯ ವರ್ಷ ಋತುಗಳ ಒಡೆಯ, ವಾಯುವ್ಯ ದಿಕ್ಕಿನ ಸ್ವಾಮಿ ಮತ್ತು ಶರೀರದಲ್ಲಿ ರಕ್ತವನ್ನು ನಿಯಂತ್ರಿಸುವವನು. ಉಪ್ಪು, ರತ್ನ ಇವನ ವಸ್ತುಗಳು, ಜ್ಯೋತಿಷ್ಯಶಾಸ್ತ್ರದಲ್ಲಿ ಇವನಿಗೆ 2 ಅಂಕ ನೀಡಲಾಗಿದೆ. ಇವನಿಗೆ ಸೂರ್ಯ, ಬುಧ ಮಿತ್ರರಾಗಿದ್ದಾರೆ. ಮಂಗಳ, ಗುರು, ಶುಕ್ರ, ಶನಿ ಸಮರಾಗಿದ್ದಾರೆ.
ಚಂದ್ರನಿಂದ ತಾಯಿ, ಅಂತಃಕರಣ, ಮನೋಭಾವ, ಉದ್ಯೋಗ, ವಿನಯ, ಪ್ರಸನ್ನತೆ, ಸಂವೇದನೆ, ರಕ್ತದೊತ್ತಡ ಸುಖ-ಸಂಪತ್ತು, ಮಾನಸಿಕ ಸ್ಥಿತಿಗಳನ್ನು ತಿಳಿಯಲಾಗುವುದು. ಸ್ವಚ್ಚ ನೀರು ಮತ್ತು ಕೃಷಿ, ನೀರಾವರಿ, ಬಿಳಿ ವಸ್ತ್ರ ಉಪ್ಪು, ಬಿಳಿ ಹೂಗಳು, ಅಕ್ಕಿ, ಜೇನುತುಪ್ಪ, ಸ್ತ್ರೀ ಆಶ್ರಯಗಳ ಸೂಚಕನಾಗಿದ್ದಾನೆ. ಸೌಭಾಗ್ಯದ ಮಾರ್ಗದರ್ಶಕ, ಗ್ರಹಸ್ಥ ಜೀವನದ ಅನುಭವ, ಸಾಮಾಜಿಕ ಸೇವೆ, ಸಹಾನುಭೂತಿ ಸೌಂದರ್ಯ, ಕಲ್ಪನಾಶಕ್ತಿ ಹಸ್ತರೇಖೆಗಳನ್ನು ತಿಳಿಯಲು ವರದಾನವಾಗಿದ್ದಾನೆ.
ಉತ್ತಮ ಕಾವ್ಯರಚನೆ, ನೀರು ಮಿಶ್ರಿತ ವಸ್ತುಗಳ ವ್ಯಾಪಾರ, ರಾಜನೀತಿ, ಸಮಾಜಸೇವೆ ಈ ವಿಷಯಗಳನ್ನು ತಿಳಿಯಲು ಸೂಚಕನಾಗಿದ್ದಾನೆ. ಸ್ತ್ರೀಯರ ಋತುಧರ್ಮ, ಪುರುಷರ ಹೃದಯ, ಅಂಡಕೋಶ, ಮನಸ್ಸಿನ ಉದ್ವೇಗಗಳ ಬಗ್ಗೆ ಚಂದ್ರನಿಂದ ತಿಳಿಯಲಾಗುವುದು.
ಅಶುಭ ಚಂದ್ರನಾಗಿದ್ದರೆ ಕಣ್ಣಿನ ದೋಷ, ಆಲಸ್ಯ ಪ್ರಮಾದ ಹುಚ್ಚುತನ, ಬಿಳಿದೋಷ, ಜಲಜಲೋದರರೋಗ, ಮಾನಸಿಕ ಪೀಡೆಗಳಿಗೆ ಕಾರಣನಾಗುವನು, ಚಂದ್ರನು ಕ್ಷೀಣನಾಗಿದ್ದರೆ ಅನೇಕ ರೋಗಗಳಿಗೆ ಕಾರಕನಾಗುವನು.
ಚಂದ್ರನ ಪ್ರಭಾವವು 20-25 ವರ್ಷಗಳ ಸಮಯದಲ್ಲಾಗುವದು. ಅಶುಭ ಚಂದ್ರನ ದೋಷ ನಿವಾರಣೆಗೆ ಶಿವರಾಧನೆ, ಮುತ್ತು ರತ್ನದರಿಸುವುದು, ಹಿತಕಾರಿಗಳಾಗಿವೆ. ಶುಭಕಾರಕನಾದ ಚಂದ್ರನಿಂದ ಬುದ್ಧಿ, ಚಲನಶೀಲತೆ, ನಮ್ರತೆ, ಉದಾರತೆ, ಕೋಮಲತೆ, ಸುಂದರತೆ ಮತ್ತು ಗುಂಗುರಾದ ಹೊಳೆಯುವ ಕೂದಲಿ ಇರುವುದಕ್ಕೆ ಕಾರಣವಾಗುತ್ತದೆ.
ಈ ರೀತಿಯಲ್ಲಿ ಭೂಮಿಗೆ ಅತ್ಯಂತ ಸನಿಹದಲ್ಲಿದ್ದು ಸದಾ ಭೂಮಿಯನ್ನು ಸುತ್ತುವರಿಯುತ್ತಿರುವ ಚಂದ್ರನು ಸಸ್ಯ, ನೀರು ಮುಂತಾದವುಗಳ ಮೇಲೆ ಅತ್ಯಂತ ಪ್ರಭಾವಕಾರಿಯಾಗಿದ್ದಾನೆ.