ಗುಜರಾತ್’ನಲ್ಲಿ ಅಕ್ಟೋಬರ್ 30, 2022 ರಂದು ನಡೆದ ಮೋರ್ಬಿ ಸೇತುವೆ ದುರಂತದ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸಲು ಗುಜರಾತ್ ಹೈಕೋರ್ಟ್ ಸೋಮವಾರ ನಿರ್ಧರಿಸಿದೆ.
ಮೋರ್ಬಿಯಲ್ಲಿ ಮಚ್ಚು ನದಿಯ ಮೇಲೆ ನಿರ್ಮಿಸಲಾಗಿದ್ದ 141 ವರ್ಷ ಹಳೆಯದಾದ ತೂಗು ಸೇತುವೆ ಅಕ್ಟೋಬರ್ 30 ರಂದು ಕುಸಿದು ಸುಮಾರು 135 ಜನರ ಸಾವನ್ನಪ್ಪಿದ್ದರು. ಒರೆವಾ ಗ್ರೂಪ್ ಎಂಬ ಖಾಸಗಿ ಸಂಸ್ಥೆ ನಡೆಸಿದ ಸೇತುವೆಯ ದುರಸ್ತಿ ಬಳಿಕ ಅದು ಕುಸಿದಿತ್ತು.
ನೂರಾರು ಮಂದಿ ಮೃತಪಟ್ಟ ಘಟನೆ ದುಃಖಕರವಾದುದು ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾ. ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ತಿಳಿಸಿತು.
“ಅಡ್ವೊಕೇಟ್ ಜನರಲ್ ಅವರೇ ಇದು ನಿರಾಶಾದಾಯಕ ಸಂಗತಿ. 100ಕ್ಕೂ ಹೆಚ್ಚು ಮಂದಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಆದ್ದರಿಂದ ನಾವು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಮುಂದಾಗಿದ್ದೇವೆ. ನೀವು (ಸರ್ಕಾರ) ಇಲ್ಲಿಯವರೆಗೆ ಯಾವ ಕ್ರಮ ತೆಗೆದುಕೊಂಡಿರುವಿರಿ ಎಂದು ತಿಳಿಯಬಯಸುತ್ತೇವೆ” ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಅದರ ಮುಖ್ಯ ಕಾರ್ಯದರ್ಶಿ, ಮೋರ್ಬಿ ನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ (ಯುಡಿಡಿ), ರಾಜ್ಯ ಗೃಹ ಇಲಾಖೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಪಕ್ಷಕಾರರನ್ನಾಗಿ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಸರ್ಕಾರ ಇದುವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಹತ್ತು ದಿನಗಳಲ್ಲಿ ವರದಿ ನೀಡಬೇಕೆಂದಿರುವ ಪೀಠ ಪ್ರಕರಣವನ್ನು ನವೆಂಬರ್ 14, 2022ಕ್ಕೆ ಪಟ್ಟಿ ಮಾಡಿದೆ. ಘಟನೆಯ ಕುರಿತು ಪ್ರತ್ಯೇಕ ವರದಿ ಸಲ್ಲಿಸುವಂತೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಸೂಚಿಸಲಾಗಿದೆ.
ಪತ್ರಿಕಾ ವರದಿಯೊಂದನ್ನು ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಳ್ಳಲು ಅಕ್ಟೋಬರ್ 31, 2022 ರಂದು ಅವರು ಹೈಕೋರ್ಟ್ ರಿಜಿಸ್ಟ್ರಾರ್ಗೆ ದೂರವಾಣಿ ಮೂಲಕ ನಿರ್ದೇಶನಗಳನ್ನು ನೀಡಲಾಗಿದ್ದರೂ ದೀಪಾವಳಿ ರಜೆ ಇದ್ದುದರಿಂದ ಪ್ರಕರಣದ ವಿಚಾರಣೆ ಸಾಧ್ಯವಾಗಿರಲಿಲ್ಲ ಎಂದು ಸಿಜೆ ಅರವಿಂದ ಕುಮಾರ್ ತಿಳಿಸಿದ್ದಾರೆ.