ಮನೆ ಸ್ಥಳೀಯ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಎನ್ ಆರ್ ಎಲ್ ಎಂ ಯೋಜನೆಗೆ ಹೆಚ್ಚು ಒತ್ತು ನೀಡಬೇಕು:...

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಎನ್ ಆರ್ ಎಲ್ ಎಂ ಯೋಜನೆಗೆ ಹೆಚ್ಚು ಒತ್ತು ನೀಡಬೇಕು: ಕೆ.ಎಂ.ಗಾಯಿತ್ರಿ

0

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಎನ್ ಆರ್ ಎಲ್ ಎಂ ಯೋಜನೆ ಸಹಕಾರಿಯಾಗಿದ್ದು, ಗ್ರಾಮಪಂಚಾಯಿತಿಗಳು ಈ ಯೋಜನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಗಾಯಿತ್ರಿ ಅವರು ತಿಳಿಸಿದರು.

Join Our Whatsapp Group

ಬುಧವಾರ ಪಿರಿಯಾಪಟ್ಟಣ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಗ್ರಾಮಪಂಚಾಯಿತಿ ಮಟ್ಟದಲ್ಲಿ ನಡೆಸುವ ಮಾಸಿಕ ಸಂತೆಯಲ್ಲಿ ಎನ್ ಆರ್ ಎಲ್ ಎಂ ಯೋಜನೆಯ ಮೂಲಕ ಸ್ಥಳೀಯ ಪದಾರ್ಥಗಳ ಮಾರುಕಟ್ಟೆಗೆ ಅವಕಾಶ ನೀಡಬೇಕು. ಗ್ರಾಮಪಂಚಾಯಿತಿಗಳು ಈ ನಿಟ್ಟಿನಲ್ಲಿ ಮುಂದುವರೆದರೆ ಜಿಲ್ಲಾ ಮಟ್ಟದಲ್ಲಿ ವೇದಿಕೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಬೆಟ್ಟದಪುರ ಗ್ರಾಮಪಂಚಾಯಿತಿಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು ಈ ಯೋಜನೆಯಡಿ ಆರ್ಥಿಕ ನೆರವು ಪಡೆದು ಬಟ್ಟೆ ಬ್ಯಾಗ್ ಗಳನ್ನು ಸಿದ್ಧಪಡಿಸುತ್ತಿದ್ದು, ಆರ್ಥಿಕವಾಗಿ ಲಾಭಗಳಿಸುತ್ತಿದ್ದಾರೆ.  ಉಳಿದ ಗ್ರಾಮಪಂಚಾಯಿತಿಯವರು ಈ ಕಡೆ ಗಮನಹರಿಸಬೇಕು. ಈ ಯೋಜನೆ ಅಳವಡಿಕೆಗೆ ಕೃಷಿ ಸಖಿ, ಪಶು ಸಖಿಗಳನ್ನು  ಬಳಸಿಕೊಳ್ಳಬೇಕು.  ವಿವಿಧ ಯೋಜನೆಗಳ ಒಗ್ಗೂಡಿಸುವಿಕೆಯೊಂದಿಗೆ  ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಒತ್ತು ನೀಡಿ ಎಂದು ಪಿಡಿಓಗಳಿಗೆ ಸಲಹೆ ನೀಡಿದರು.

ನರೇಗಾ ಯೋಜನೆಯಡಿ ನಿಗಧಿತ  ಗುರಿ ಸಾಧಿಸದ  ಗ್ರಾಮಪಂಚಾಯಿತಿಗಳಿಗಳಲ್ಲಿ ಐಇಸಿ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸಿ ಜಾಗೃತಿ ಮೂಡಿಸುವ ಮೂಲಕ ಜನರು ಹೆಚ್ಚಿನದಾಗಿ ನರೇಗಾ ಕೆಲಸದಲ್ಲಿ ಭಾಗವಹಿಸುವಂತೆ  ತಿಳಿಸಿದರು.

ಈಗಾಗಲೇ ಸಂಜೀವಿನಿ ಶೆಡ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿರುವ  ಪಂಚಾಯಿತಿಗಳಲ್ಲಿ  ಕೂಡಲೇ ಕಾಮಗಾರಿಯನ್ನು ಆರಂಭಿಸಿ ಹಾಗೂ  ಪ್ರಗತಿಯಲ್ಲಿರುವ  ಶಾಲಾ ಶೌಚಾಲಯ, ಕಾಂಪೌಂಡ್, ಆಟದ ಮೈದಾನ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಹೇಳಿದರು.

 ಉಳಿದಂತೆ ಘನತ್ಯಾಜ್ಯ ವಿಲೇವಾರಿ ಘಟಕ, ಜೆಜೆಎಂ, ತೆರಿಗೆ ವಸೂಲಿ ಸಮಸ್ಯೆಗಳನ್ನು ಆಲಿಸಿದರು. ಗ್ರಾಮಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಿದ್ದು, ಸ್ಥಳೀಯವಾಗಿ ಅಭಿವೃದ್ಧಿಪಡಿಸುವುದು ಪಿಡಿಓಗಳ ಕರ್ತವ್ಯ. ಕಾನೂನು ವ್ಯಾಪ್ತಿಯಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆದ್ಯತೆಯ ಮೇರೆಗೆ ಕೆಲಸ ಮಾಡಿ. ಎಲ್ಲಾ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಿ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಪ್ರಭುಸ್ವಾಮಿ ಅವರು ಮಾತನಾಡಿ, ಎನ್ ಆರ್ ಎಲ್ ಎಂ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ  ಸಹಕಾರಿಯಾಗಿದ್ದು, ಪಿಡಿಓಗಳು ಎಂಬಿಕೆಗಳು, ಪಶುಸಖಿ, ಕೃಷಿಸಖಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಗ್ರಾಮೀಣ ಪ್ರದೇಶದ ಹಣ್ಣುಗಳು, ಸೊಪ್ಪು, ಧಾನ್ಯ ಪದಾರ್ಥಗಳಿಗೆ ವಿಶೇಷ ಬೇಡಿಕೆ ಹಾಗೂ ಉತ್ತಮ ಬೆಲೆಯಿದ್ದು, ಅದನ್ನು ಒದಗಿಸುವ ಕಾರ್ಯವಾಗಬೇಕಿದೆ.  ಎನ್ ಆರ್ ಎಲ್ ಎಂ ಯೋಜನೆಯಡಿ ಸ್ವ-ಸಹಾಯ ಸಂಘದ ಮಹಿಳೆಯರು 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಲು ಅವಕಾಶವಿದ್ದು, ಮಹಿಳೆಯರು  ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಬಿ.ಸುನಿಲ್ ಕುಮಾರ್, PRED AEE ಮಲ್ಲಿಕಾರ್ಜುನಸ್ವಾಮಿ, RWS AEE ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ(ಗ್ರಾ.ಉ)ರಾದ ಕರುಣಾಕರ್, ಲೆಕ್ಕಾಧಿಕಾರಿ  ರಂಗನಾಥ್  ಹಾಗೂ 34  ಗ್ರಾಮಪಂಚಾಯಿತಿ ಪಿಡಿಓಗಳು, ನರೇಗಾ ಹಾಗೂ NRLM ಸಿಬ್ಬಂದಿ ಹಾಜರಿದ್ದರು.