ಬಳ್ಳಾರಿ : ಬಾಡಿಗೆ ಪಡೆದ 200ಕ್ಕೂ ಹೆಚ್ಚು ಕಾರುಗಳನ್ನು ಗಿರವಿಯಿಟ್ಟು ಹಣಪಡೆದು ವಂಚಕನೋರ್ವ ಪರಾರಿಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ಎಂ.ಡಿ ಜಹೀದ್ ಭಾಷಾ ಅಲಿಯಾಸ್ ಸೋನೊ 200ಕ್ಕೂ ಹೆಚ್ಚು ಜನರಿಗೆ ವಂಚಿಸಿ ಪರಾರಿಯಾಗಿದ್ದಾನೆ. ಎರಡು ಮೂರು ತಿಂಗಳು ಕಾರಿಗೆ ಬಾಡಿಗೆ ಕೊಟ್ಟು ಬಳಿಕ ಕೈ ಕೊಟ್ಟಿದ್ದಾನೆ.
ಆರು ತಿಂಗಳಿಂದ ಸತತವಾಗಿ ಬಳ್ಳಾರಿಯ ತನ್ನ ಸ್ನೇಹಿತರ ಮೂಲಕ ಕಾರುಗಳನ್ನ ಇತರರಿಂದ ಬಾಡಿಗೆ ಪಡೆದಿದ್ದ ಎಂ.ಡಿ ಜಹೀದ್ ಪಾಷಾ ಸಿಂಧನೂರಿನಲ್ಲಿ ಕಾರುಗಳನ್ನ ಗಿರವಿ ಇಟ್ಟು ಹಣಪಡೆದು ಎಸ್ಕೇಪ್ ಆಗಿದ್ದಾನೆ.
ಜಹೀದ್ ಪಾಷಾ ನೇರವಾಗಿ ಕಾರು ಮಾಲಿಕರಿಗೆ ಸಂಪರ್ಕವೇ ಇರಲಿಲ್ಲ. ಎಲ್ಲವನ್ನೂ ಸ್ಥಳೀಯ ಸ್ನೇಹಿತರ ಮೂಲಕ ವ್ಯವಹಾರ ಮುಗಿಸಿ ಬಾಡಿಗೆ ಅಗ್ರಿಮೆಂಟ್ ಕೊಟ್ಟಿದ್ದ. ಇತ್ತೀಚೆಗೆ ಬಾಡಿಗೆ ಕೊಡದಿದ್ದ ಹಿನ್ನೆಲೆ ಕಾರು ಮಾಲೀಕರು ಕಾರಿನ ಜಿಪಿಎಸ್ ಟ್ರೇಸ್ ಮಾಡಿ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಜಹೀದ್ ಪಾಷಾ ಬಾಡಿಗೆ ಪಡೆದಿದ್ದ ಕಾರುಗಳನ್ನು ಇತರ ದೊಡ್ಡ ದೊಡ್ಡ ಜನರ ಬಳಿ ಗಿರವಿಯಿಟ್ಟಿದ್ದಾನೆ. ಇದೀಗ ಕಾರು ಮಾಲೀಕರು ವಂಚಕನ ವಿರುದ್ಧ ಬಳ್ಳಾರಿ ಬ್ರೂಸ್ ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.















