ನವದೆಹಲಿ: ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ವಿವಿಧ ರಾಜ್ಯಗಳು ಹಾಗೂ ಕೇಂದ್ರೀಯ ಸಂಸ್ಥೆಗಳ 460ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು 2024ನೇ ಸಾಲಿನ ‘ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ಕ್ಕೆ ಆಯ್ಕೆ ಮಾಡಲಾಗಿದೆ.
ವಿಶೇಷ ಕಾರ್ಯಾಚರಣೆಗಳು, ವಿಧಿ ವಿಜ್ಞಾನ ಪರೀಕ್ಷೆ ಮತ್ತು ತನಿಖೆಗಳ ಸಂದರ್ಭಗಳಲ್ಲಿ ಸಲ್ಲಿಸಿದ ಅಸಾಧಾರಣ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರೀಯ ಪೊಲೀಸ್ ಸಂಸ್ಥೆಗಳ 463 ಸಿಬ್ಬಂದಿಗೆ 2024ನೇ ಸಾಲಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ವು ಎಲ್ಲ ಪೊಲೀಸರಲ್ಲಿ ನೈತಿಕ ಸ್ಥೈರ್ಯವನ್ನು ಹುರಿದುಂಬಿಸುತ್ತದೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 31ರಂದು, ಈ ಪದಕ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಪಟ್ಟಿಯು ಕೇಂದ್ರ ಗೃಹ ಸಚಿವಾಲಯದ ವೆಬ್ಸೈಟ್ನಲ್ಲಿ ಲಭ್ಯವಿದೆ.