ಮೈಸೂರು: ರಾಜ್ಯದಲ್ಲಿ ಬೇರೆ ವಿವಿಗಳಿಗೆ ಹೋಲಿಸಿದರೆ ಮೈಸೂರು ವಿವಿಯಲ್ಲೇ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಇಂಟರ್ ನ್ಯಾಷನಲ್ ಸೆಂಟರ್ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ‘‘ಓರಿಯೆಂಟೇಷನ್ ಪ್ರೋಗ್ರಾಮ್’’ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಎರಡು ವರ್ಷದಿಂದ ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳು ಮೈಸೂರು ವಿವಿಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಿರಲ್ಲ. ಆದರೆ, ಈ ವರ್ಷ ಕೊರೊನಾ ಕ್ಷೀಣಿಸಿರುವ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದು ಸಂತಸದ ವಿಷಯ. ಈ ಬಾರಿ 148 ವಿದೇಶಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಇದರಲ್ಲಿ ಅಫ್ಘಾನಿಸ್ತಾನದಿಂದಲೇ 92 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇದು ಇತರ ವಿವಿಗಳಿಗೆ ಹೋಲಿಸಿದರೆ ನಮ್ಮಲ್ಲಿಯೇ ಹೆಚ್ಚು ಎಂದರು.
ಪ್ರತಿಬಾರಿ ವಿದೇಶಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಹಾಗೂ ಫಾರ್ಮಸಿ ಕಾಲೇಜು ಯಾವಾಗ ಆರಂಭ ಮಾಡುತ್ತೀರಾ ಎಂದು ಕೇಳುತ್ತಿದ್ದರು. ಸದ್ಯ ಎಂಜಿನಿಯರಿಂಗ್ ಕಾಲೇಜು ಆರಂಭಿಸಲಾಗಿದ್ದು, ಶೀಘ್ರವೇ ಫಾರ್ಮಸಿ ಕಾಲೇಜನ್ನು ಪ್ರಾರಂಭಿಸಲಾಗುವುದು. ಸ್ವತಃ ದೇಶ ಬಿಟ್ಟು ಸಾಕಷ್ಟು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಆಗಮಿಸುತ್ತಾರೆ. ನಿಮ್ಮ ಶಿಕ್ಷಣ ಎಲ್ಲಾ ಮುಗಿದು ನಿಮ್ಮ ದೇಶಕ್ಕೆ ಹೋಗುವವರೆಗೂ ನಿಮ್ಮ ಕಾಳಜಿ ನಾವು ಮಾಡುತ್ತೇವೆ. ಗುರಿ ಅಚಲವಾಗಿರಲಿ. ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇದೇ ವೇಳೆ ಇಂಟರ್ ನ್ಯಾಷನಲ್ ಸ್ಟುಡೆಂಟ್ ಅಡ್ವೈಸರಿ ಬುಕ್ ಬಿಡುಗಡೆ ಮಾಡಲಾಯಿತು.
ಐಸಿಸಿಆರ್ ಮಾಜಿ ಪ್ರಾದೇಶಿಕ ನಿರ್ದೇಶಕ ಪಿ. ವೇಣುಗೋಪಾಲ್, ಐಸಿಸಿಆರ್ ಪ್ರಾದೇಶಿಕ ಅಧಿಕಾರಿ ಸುದರ್ಶನ್ ಶೆಟ್ಟಿ, ರಾಣಿ ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಮುಖ್ಯಸ್ಥ ಪ್ರೊ. ಡಿ.ಆನಂದ್, ಮೈಸೂರು ಚಾಪ್ಟರ್ ಅಧ್ಯಕ್ಷ ಸೈರೋಸ್ ಝಬೊಲಿ ಸೇರಿದಂತೆ ಇತರರು ಇದ್ದರು.