ಮನೆ ರಾಜ್ಯ ಪತ್ರಕರ್ತ ಹುದ್ದೆಗೆ ಬರುವವರೆಲ್ಲಿ ಹೆಚ್ಚಿನವರು ಕಷ್ಟದ ಕುಟುಂಬಗಳಿಂದ ಬರುವವರು: ಕೆ.ವಿ.ಪ್ರಭಾಕರ್

ಪತ್ರಕರ್ತ ಹುದ್ದೆಗೆ ಬರುವವರೆಲ್ಲಿ ಹೆಚ್ಚಿನವರು ಕಷ್ಟದ ಕುಟುಂಬಗಳಿಂದ ಬರುವವರು: ಕೆ.ವಿ.ಪ್ರಭಾಕರ್

0

ಬೆಂಗಳೂರು: ಗ್ರಾಮೀಣ ಪತ್ರಕರ್ತರ ಶ್ರಮ ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಿ ಅವರ ಬಹುವರ್ಷಗಳ  ಬೇಡಿಕೆ ಈಡೇರಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿನಂದನೆ ಸಲ್ಲಿಸಿದರು.

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಬೇಡಿಕೆಯನ್ನು ಈ ಬಾರಿಯ ಬಜೆಟ್ ನಲ್ಲಿ ಈಡೇರಿಸಿದ್ದಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪತ್ರಕರ್ತರ ಸಂಘ ಮತ್ತು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನಿರಂತರ ಶ್ರಮದಿಂದಾಗಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ದೊರಕಿದೆ. ಇವರ ಬೇಡಿಕೆ ಮತ್ತು ಹೋರಾಟವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಂಥಾ ಸಂದರ್ಭದಲ್ಲಿ ಅವರು ಸ್ಪಂದಿಸಿದ ರೀತಿಯನ್ನು ಕೆ.ವಿ.ಪ್ರಭಾಕರ್ ವಿವರಿಸಿದರು.

ಪತ್ರಕರ್ತ ಹುದ್ದೆಗೆ ಬರುವವರಲ್ಲಿ ಹೆಚ್ಚಿನವರು ಕಷ್ಟದ ಕುಟುಂಬಗಳಿಂದ ಬರುವವರು. ಆದ್ದರಿಂದ ಸರ್ಕಾರ ಈ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಬೇಕಾಗುತ್ತದೆ ಎಂದರು.‌

ಪತ್ರಕರ್ತರ ಪೆನ್ಷನ್ ಮತ್ತು ನಿವೇಶನ ಸೇರಿ ಪತ್ರಕರ್ತರಿಗೆ ಇಲಾಖೆಯಿಂದ, ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಸಿಗದಂತೆ ಅಡ್ಡಿ ಆಗಿರುವ ಎಲ್ಲಾ ತಾಂತ್ರಿಕ ಅಡೆ ತಡೆಗಳನ್ನು ನಿವಾರಿಸಲು ಸತತ ಪ್ರಯತ್ನ ಮತ್ತು ಸಭೆ ನಡೆಸುತ್ತಿದ್ದೇವೆ. ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು. 

ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮಾಧ್ಯಮ ಸಲಹೆಗಾರರಾದ ಲಕ್ಷ್ಮೀನಾರಾಯಣ್ ಅವರೂ ಈ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಕೆ.ವಿ.ಪ್ರಭಾಕರ್ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲಾ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.