ಮನೆ ಕಾನೂನು ರಾಜಕೀಯ ದ್ವೇಷದಿಂದ ಅತಿ ಹೆಚ್ಚು ಹತ್ಯೆ: ನ್ಯಾ. ಶ್ರೀಶಾನಂದ

ರಾಜಕೀಯ ದ್ವೇಷದಿಂದ ಅತಿ ಹೆಚ್ಚು ಹತ್ಯೆ: ನ್ಯಾ. ಶ್ರೀಶಾನಂದ

0

ಅನೈತಿಕ ಸಂಬಂಧ, ಲಾಭ ಮತ್ತು ರಾಜಕೀಯ ದ್ವೇಷ ಈ ಮೂರಲ್ಲಿ ಯಾವುದಾದರೂ ಒಂದು ಕಾರಣಕ್ಕೆ ಹೆಚ್ಚು ಕೊಲೆಗಳಾಗುತ್ತವೆ. ಅದರಲ್ಲೂ ರಾಜಕೀಯ ದ್ವೇಷದಿಂದ ಅತಿ ಹೆಚ್ಚು ಹತ್ಯೆಗಳಾಗುತ್ತಿವೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಕಳವಳ ವ್ಯಕ್ತಪಡಿಸಿತು.

ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿ ವಿಚಾರಣೆ ಮುಂದೂಡಲು ಪೀಠ ಮುಂದಾಯಿತು. ಆಗ ಮಧ್ಯಪ್ರವೇಶಿಸಿದ ಆರೋಪಿ ಪರ ವಕೀಲರು, ಅರ್ಜಿದಾರರು ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾರೆ. ಇದೇ ಕಾರಣಕ್ಕೆ ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಅರ್ಜಿದಾರರನ್ನು ಸುಖಾಸುಮ್ಮನೆ ಬಂಧಿಸಲಾಗಿದ್ದು, ಜಾಮೀನು ನೀಡಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ರೀವಕೀಲರೇ ಸುಖಾಸುಮ್ಮನೆ ಯಾರನ್ನೂ ಬಂಧಿಸುವುದಿಲ್ಲ. ಹಾಗೆ ಬಂಧಿಸಿದರೆ ಅದು ಅಕ್ರಮ ಬಂಧನವಾಗುತ್ತದೆ. ಪ್ರಕರಣದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ನಾವು ಎಷ್ಟೇ ಪ್ರಯತ್ನಿಸಿದರೂ ಆತನನ್ನು ಬದುಕಿಸಲಾಗದು. ಕೊಲೆಗಳು ನಡೆಯುವುದೇ ಮೂರು ಕಾರಣಗಳಿಗೆ. ಒಂದು ಅನೈತಿಕ ಸಂಬಂಧ ಹೊಂದಿರುವುದಕ್ಕೆ, ಮತ್ತೊಂದು ಯಾವುದಾದರೂ ಲಾಭಕ್ಕಾಗಿ, ಮೂರನೆಯದು ರಾಜಕೀಯ ದ್ವೇಷಕ್ಕೆ. ಅದರಲ್ಲೂ ರಾಜಕೀಯ ದ್ವೇಷದಿಂದ ಅತಿ ಹೆಚ್ಚು ಹತ್ಯೆಗಳಾಗುತ್ತಿವೆ. ಕಾರಣ ಇರದಿದ್ದರೆ ಹತ್ಯೆಗಳು ನಡೆಯುವುದಿಲ್ಲ” ಎಂದು ವಿಶ್ಲೇಷಿಸಿದರು.

“ತನ್ನ ರಾಜಕೀಯ ಬೆಳವಣಿಗೆಗೆ ವ್ಯಕ್ತಿಯೋರ್ವ ಅಡ್ಡವಾಗಿದ್ದು, ಹತ್ಯೆಗೈದರೆ ಎಲ್ಲವೂ ಸರಿಹೋಗುತ್ತವೆ ಎಂಬ ಭಾವನೆ ಮೂಡಿದರೆ ಸಾಕು; ಕೊಲೆಗಳು ನಡೆದು ಹೋಗುತ್ತವೆ. ಹತ್ಯೆಗೈದು ಜೈಲಿಗೆ ಹೋಗಿ ಹೊರಬಂದರೂ ಆರೋಪಿ ಮಾತ್ರ, ನೋಡು ಅವನ ಗತಿ ಏನಾಯಿತು. ಜೈಲಿಗೆ ಹೋಗಿ ಬಂದರೂ ನನಗೇನು ಆಗಲಿಲ್ಲ ಎಂಬುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಾನೆ. ಇನ್ನೂ ನ್ಯಾಯಾಲಯ ಜಾಮೀನು ನೀಡಿದರೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ ಎನ್ನುತ್ತಾರೆ. ಜಾಮೀನು ಸಿಗದಿದ್ದರೆ ನನ್ನ ವಿರುದ್ಧ ಷಡ್ಯಂತ ಮಾಡಿರುವುದಾಗಿ ಸಿದ್ಧ ಉತ್ತರ ನೀಡುತ್ತಾರೆ” ಎಂದು ವ್ಯಂಗ್ಯ ಮಾಡಿದರು.

“ನಿಮ್ಮ ಪ್ರಕರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎಂಬ ಕಾರಣಕ್ಕಾಗಿ ಜಾಮೀನು ನಿರಾಕರಿಸಬೇಕೆಂಬುದು ನ್ಯಾಯಾಲಯದ ಉದ್ದೇಶವಲ್ಲ. ಗ್ರಾಮ ಪಂಚಾಯಿತಿ ಸದಸ್ಯನಾಗಿ ಊರಿನಲ್ಲಿ ಆತನ ಖದರ್ ಏನಿದೆ? ಜಾಮೀನು ಕೊಡುವುದು ಎಷ್ಟು ಸೂಕ್ತ ಎಂಬುದ್ದನ್ನು ಪರಿಶೀಲಿಸಬೇಕಿದೆ. ಪ್ರಕರಣದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು, ಆ ಪರಿಸ್ಥಿತಿಯ ತೀವ್ರತೆ ಹಾಗೂ ಗಂಭೀರತೆ ಗಮನದಲ್ಲಿಕೊಂಡು ಜಾಮೀನು ನೀಡುವ ವಿಚಾರವನ್ನು ನಿರ್ಧರಿಸಬೇಕಾಗುತ್ತದೆ. ಕೇಳಿದ್ದಾರೆ ಎಂಬ ಮಾತ್ರಕ್ಕೆ ಜಾಮೀನು ನೀಡುವಂತಾಗಬಾರದು. ಅದಕ್ಕಾಗಿಯೇ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಲಾಗಿದೆ” ಎಂದು ತಿಳಿಸಿದ ಪೀಠವು ಮಾರ್ಚ್‌ 18ಕ್ಕೆ ಅರ್ಜಿ ವಿಚಾರಣೆ ಮುಂದೂಡಿತು.