ಬೆಂಗಳೂರು: ನ್ಯಾಯ ಕೊಡಿಸಿ ಎಂದು ಅಮ್ಮ, ಮಗಳು ಹಲವು ಸಲ ನನ್ನ ಬಳಿ ಬಂದಿದ್ದರು ಎಂದು ಮಾಜಿ ಸಿಎಂ, ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪದ ವಿಚಾರವಾಗಿ ದಾಖಲಾಗಿರುವ ಎಫ್ಐಆರ್ ಬಗ್ಗೆ ನೀಡಿದ್ದು, ತಾಯಿ-ಮಗಳು ಅನೇಕ ಸಲ ಇಲ್ಲಿಗೆ ಬಂದು ಹೋಗಿದ್ದರು. ಅನ್ಯಾಯ ಆಗಿದೆ ಎಂದು ನನ್ನ ಬಳಿ ಬಂದಿದ್ದರು. ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ಅದಾದ ಮೇಲೆ ನನ್ನ ವಿರುದ್ಧ ಏನೇನೋ ಮಾತನಾಡಿದರು. ಬಳಿಕ ಅವರನ್ನ ಕಮಿಷನರ್ ಬಳಿ ಕಳಿಸಿಕೊಟ್ಟೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಉಪಕಾರ ಮಾಡಿದರೆ ಈಗ ನನ್ನ ಮೇಲೆಯೇ ಹೀಗೆ ಆರೋಪ ಮಾಡಿದ್ದಾರೆ. ಯಾರೋ ಒಬ್ಬ ಹೆಣ್ಣು ಮಗಳು ದೂರು ಕೊಟ್ಟಿದ್ದಾರೆ. ಇರಲಿ ಎದುರಿಸೋಣ. ನಾನು ಈ ಕುರಿತು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಏನಿದು ಪ್ರಕರಣ?
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಳೆದ ಫೆಬ್ರವರಿಯಲ್ಲಿ ಮಗಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು , ಬಿಸಿನೆಸ್ ಮ್ಯಾನ್ಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ದವೇ ಸಂತ್ರಸ್ತ ಬಾಲಕಿಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು.