ಹೈದರಾಬಾದ್: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಸಿನಿಮಾದ ಹವಾ ಜೋರಾಗಿದ್ದು ಬುಧವಾರ ದೇಶದೆಲ್ಲೆಡೆ ಸಿನಿಮಾ ಬಿಡುಗಡೆಯಾಗಿದೆ, ಬುಧವಾರ ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋಗೆ ಅಭಿಮಾನಿಗಳ ದಂಡೇ ಹರಿದು ಬಂದಿದ್ದು ಈ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ಬಳಿ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟು ಆಕೆಯ ಮಗ ಗಂಭೀರ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಈ ಘಟನೆ ನಡೆದಿದ್ದು, ದಿಲ್‌ಸುಖ್‌ನಗರದವರಾದ ರೇವತಿ ಅವರು ತಮ್ಮ ಪತಿ ಭಾಸ್ಕರ್ ಅವರು ಇಬ್ಬರು ಮಕ್ಕಳೊಂದಿಗೆ ಸಂಧ್ಯಾ ಥಿಯೇಟರ್ ಗೆ ಬಂದಿದ್ದರು ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ರೇವತಿ ಮೃತಪಟ್ಟರೆ ಮಗ ಗಂಭೀರ ಗಾಯಗೊಂಡಿದ್ದು ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಭಾರಿ ಜನಸ್ತೋಮ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರೊಂದಿಗೆ ಚಿತ್ರ ಮಂದಿರಕ್ಕೆ ಆಗಮಿಸಿದ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಾಗ ಚಿತ್ರಮಂದಿರದ ಹೊರಗೆ ಗೊಂದಲದ ವಾತಾವರಣ ಉಂಟಾಯಿತು. ಅಲ್ಲದೆ ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು ಇದರಿಂದ ಗೊಂದಲ ಉಂಟಾಗಿ ಜನ ಓಡಲಾರಂಭಿಸಿದ ಪರಿಣಾಮ ಅವಘಡ ಸಂಭವಿಸಿದೆ ಅಲ್ಲದೆ ಘಟನೆಯಿಂದ ಥಿಯೇಟರ್‌ನ ಮುಖ್ಯ ಗೇಟ್ ಕುಸಿದಿದೆ ಎನ್ನಲಾಗಿದೆ.
ಚಿತ್ರಮಂದಿರದ ಬಳಿ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದರಿಂದ ಅವರನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.