ಮನೆ ದೇವಸ್ಥಾನ ತಾಯಿ ಪರದೇವತೆ

ತಾಯಿ ಪರದೇವತೆ

0

ಶಿವ-ಪಾರ್ವತಿಯರಿಂದ ಅನುಗ್ರಹಿತವಾದ ಸಪ್ತಮಾತೃಕೆಯರು ಭೂಮಂಡಲವನ್ನು ಪ್ರವೇಶಿಸಿ ಬೇರೆ ಬೇರೆ ಕಡೆಗಳಲ್ಲಿ ವಿವಿಧ ನಾಮಧೇಯಗಳಿಂದ ನೆಲೆಯೂರಿದರು. ದೇಗುಲಗಳಲ್ಲಿ ವೈದಿಕ ಮತ್ತು ದೈವಸ್ಥಾನ, ಕಾವ್, ಕಳಗಂ, ಕೊಟ್ಯ ಇತ್ಯಾದಿಗಳಲ್ಲಿ ಶಾಕ್ತೇಯವಾಗಿ ಆರಾಧಿಸಲ್ಪತೊಡಗಿದರು. ಮಧುರದೈ ಮೀನಾಕ್ಷಿ, ಕನ್ಯಾಕುಮಾರಿಯ ಕುಮಾರಿ ಆದಿಯಾಗಿ ತಮಿಳುನಾಡಿನಾದ್ಯಂತವಿರುವ ದೇವೀಕ್ಷೇತೆಗಳಿಗೂ, ತಿರುವನಂತಪುರದ ಆಟ್ಟುಕಾಲ್ ಭಗವತೀ ಕ್ಷೇತ್ರ, ಚೋಟ್ಟಾನಿಕ್ಕರ್ ಭಗವತಿ, ಕೊಡುಂಗಲ್ಲೂರು ಭಗವತಿಯಾದಿಯಾಗಿ ಕೇರಳ ವ್ಯಾಪಿಸಿರುವ ಶಕ್ತಿ ಸ್ವರೂಪಿಣಿ ದೇವಿಯು ಕ್ಷೃತ್ರಗಳೆಲ್ಲವೂ ಒಂದೊಂದು ಸಪ್ತಮಾತೃಕೆಯ ಅಂಸಾವತಾರದ್ದೆಂದು ತಿಳಿಯಬಹುದಾಗಿದೆ. ತಮಿಳುನ್ನಾಡು ಮತ್ತು ಕೇರಳದಲ್ಲಿ ಒಂದಾದರೂ ದೇವೀ ಕ್ಷೇತ್ರವಿಲ್ಲದ ಗ್ರಾಮಗಳೇ ಇಲ್ಲವೆಂದಾದಾಗ ಹಿಂದಿನೊಂದಲೇ ಈ ಪ್ರದೇಶಗಳಲ್ಲಿ ʼಶಕ್ತ್ಯಾರಾಧನೆʼ ಗೆ ಇದ್ದಂತಹ ಮಹತ್ವವನ್ನು ಮನಗಾಣಬಹುದು.

 ಸಪ್ತಮಾತೃಕೆಯರಲ್ಲಿ ಅಧಿದೇವತೆಯಾದ ಮಹಾಕಾಳಿಯು ಪ್ರಥಮವಾಗಿ ನೆಲೆಯೂರಿದ ಸ್ಥಳ ಕೊಡುಂಗಲ್ಲೂರು ಆಗಿದೆ. ಚೇರ ರಾಜವಂಶದಿಂದ ನಿರ್ಮಾಣಗೊಂಡ ಈ ಕ್ಷೇತ್ರವು ಕೇರಳ ರಾಜ್ಯದ ಪ್ರಥಮ ಹಾಗೂ ಪ್ರಧಾನ ದೇವೀ ಕ್ಷೇತ್ರವಾಗಿದೆಯೆಂದೂ ಚರಿತ್ರೆಯಿಂದ ತಿಳಿಯಬಹುದಾಗಿದೆ. ಕೊಡ್ಲುಂಗಲ್ಲೂರು ಮಹಾಕಾಳಿಗೆ  ಶಾಕ್ತೇಯ ಕ್ರಮವು ಇಷ್ಟದಾಯಕವೆಂದು ಪಟ್ಟುಹಿಡಿದಾಗ ಆಕೆಯ ಅಸುರೀ ಶಕ್ತಿಯನ್ನು ಶಂಖದಲ್ಲಿ ಅವಾಹಿಸಿ, ಪಶ್ಚಿಮ ಸಮುದರಕ್ಕೆಸೆಯಲು ಪರಶುರಾಮರಿಗೆ ಪರಮಶಿವನು ನಿರ್ದೇಶಿಸಿದನೆಂದೂ, ಅ ಶಂಖವು ಪಶ್ಚಿಮಾಂಬುಧಿಯಲ್ಲಿ ಉತ್ತರಾಭಿಮುಖವಾಗಿ ಆಗಮಿಸಿ, ಕಣ್ಣೂರು ಜಿಲ್ಲೆಯ ಪಯಂಗಾಡಿಯ ಹತ್ತಿರ ತಿರುವರ್ ಕ್ಕಾಟ್ (ಮಾಡಾಯಿ) ಎಂಬಲ್ಲಿ ಬಿದ್ದು ಸಾನ್ನಿಧ್ಯ ಪ್ರಕಟಿಸಿತು. ಶಂಖದಲ್ಲಿದ್ದ ಭಗವತಿಯು ಅಲ್ಲಿಯೇ ನೆಲೆಯಾದಳೆಂದೂ ಕ್ಷೇತ್ರ ಪುರಾಣದಲ್ಲಿ ಹೇಳಲಾಗಿದೆ. ಇಲ್ಲಿ ಮಹಾಕಾಳಿಯನ್ನು ಭಗವತಿ ಎಂದು ಶಾಸ್ತ್ರೀಯ ಕ್ರಮದಲ್ಲಿ ಆರಾಧಿಸಲಾಗುತ್ತದೆ.

ಉತ್ತರ ಕೇರಳದ ತೆಯ್ಯಂ – ತಿರಗಳಿಗೆಲ್ಲಾ ಮೂಲಸ್ಥಾನ ಮಾಡಾಯಿಕಾವು ಆಗಿದೆ. ಇಲ್ಲಿ ದೇವಿಯನ್ನು ಬಿಂಬದಲ್ಲಿಯೂ, ತೆಯ್ಯಂ ರೂಪವಾಗಿ ನರ್ತನ ಕೋಲದಲ್ಲಿಯೂ ಕೊಂಡಾಡಲಾಗುತ್ತದೆ. ದುಷ್ಟಭೂತ-ಗಣಗಳನ್ನೆಲ್ಲ ನಾಶಗೊಳಿಸಲು ಸಮರ್ಥೆಯಾಗಿರುವ ಭಗವತಿಯನ್ನು ʼಮಾಡಾಯಿಕಾವಿಲಮ್ಮʼ, ʼಮಾಡಾಯಿಕಾವಿಲೇಚ್ಚಿʼ ಎಂದು ಭಜಿಸುತ್ತಾರೆ. ಮರಣಾದಿ ದೋಷಗಳ ಪರಿಹಾರವನ್ನು ಇಲ್ಲಿ ನೆರವೇರಿಸಲಾಗುತ್ತದೆ. ಅಸುರಕ್ರಿಯಾ ವಿಧಾನದಲ್ಲಿ ಇಲ್ಲಿ ದೇವಿಯು ಪೂಜಿಸಲ್ಪಡುವುದರಿಂದ ವಿಗ್ರಹ ಪ್ರತ್ಯೇಕ ವಿಧಿ-ವಿಧಾನ ಪ್ರಕಾರವಾಗಿ ಕಡುಶರ್ಕರ ಪಾಕದಲ್ಲಿ ನಿರ್ಮಿಸಲಾಗಿದೆ. ಭಗವತಿಯನ್ನು ತೆಯ್ಯಂ- ತೀರವಾಗಿ ಆರಾಧಿಸುವ ಕೋಲ ಸ್ವರೂಪಂ ವಿಧಾನಕ್ಕೆ ಕಾರಣಕರ್ತರಾದ ಕೊಲತ್ನಾಡಿನ ರಾಜವಂಶದ ಕುಲದೇವತೆಯು ಮಾಡಾಯಿಕಾವಿಲಮ್ಮ ಆಗಿರುತ್ತಾಳೆ. ತಳಿಪರಂಬದ ಶ್ರೀ ರಾಜ ರಾಜೇಶ್ವರ ದೇಗುಲದಲ್ಲಿ ನೆಲೆಯಾಗಿರುವ ಶಕ್ತಿ ಸ್ವರೂಪಿಣಿಯು ಇವಳೇ ಆಗಿದ್ದಾಳೆ.

ದೈವ-ಭೂತ ಗಣಗಳಿಗೆಲ್ಲಾ ಆದಿ ದೈವವಾಗಿರುವ ಭಗವತಿಯನ್ನು ನಾಡಿನಾದ್ಯಂತ ʼಮಾತೃದೇವತೆʼ ಯೆಂದೂ, ʼತಾಯಿಪ್ಪರದೇವತೆʼ ಎಂದು ಕೊಂಡಾಡುತ್ತಾರೆ. ತಾಯಿಪ್ಪರ ದೇವತೆ ಎಂದರೆ ʼಅಮ್ಮʼ ಅಥವಾ ʼಧರ್ಮದೈವʼ ಎಂದಾಗಿದೆ. ಒಂದೊಂದು ಊರಿನಲ್ಲಿ, ಒಂದೊಂದು ಹೆಸರಿನಲ್ಲಿ ಈ ಭದ್ರೆಯನ್ನು ದೈವವಾಗಿ ಆರಾಧಿಸಲಾಗುತ್ತದೆ. ಆದರೆ ತೋತ್ತಂಪಾಟುನಲ್ಲಿಯೂ, ನರ್ತನಾಕ್ರಮದ ಕಟ್ಟುಕಟ್ಟಳೆಯಲ್ಲೂ ಹೆಚ್ಚಿನ ವ್ಯತ್ಯಾಸವಿಲ್ಲ.    

ದೇಶದುದ್ದಗಲಕ್ಕೂ ಇಂತಹ ಅನೇಕ ಹೆಸರುಗಳಿಂದ ಕರಿಯಲ್ಪಡುವ ʼತೆಯ್ಯಂʼ ಬೇರೆ ಇಲ್ಲ. ತೆಯ್ಯಂ-ತಿರ ರಂಗಗಳೆರಡರಲ್ಲಿಯೂ ಭಕ್ತರು ನಂಬಿಕೊಂಡು ಬರುತ್ತಿರುವ ಭಗವತಿಯರು, ಕಾಳಿಯರು, ಚಾಮುಂಡರು, ಇವೆಲ್ಲವೂ ತಾಯಿಪ್ಪರ ದೇವತೆಯ ಸಂಕಲ್ಪವಾಗಿದ್ದು, ಮಾತೃದೇವತೆಗಳೆಂದೇ ಕರೆಯಲ್ಪಡುತ್ತಿವೆ. ಸರ್ವರೋಗ ನಿವಾರಣೆಯು, ಸರ್ವೋಪದ್ರವನಾಶಿನಿಯು ಆಗಿರುವ ಈಕೆಯನ್ನು ಹೆಣ್ಣು, ಮಣ್ಣು, ಸಂತಾನ ಪ್ರಾಪ್ತಿ, ಫಲ ಸಮೃದ್ಧಿ ಮೊದಲಾದ ಪರಿಕಲ್ಪನೆ ಮತ್ತು ಉದ್ದೇಶಗಳನ್ನು ಹೊಂದಿ ಆರಾಧಿಸುವವರಿಗೆ ಅಭಯಹಸ್ತೆಯಾಗಿ ಕರುಣಿಸುವುದರಿಂದ ಈ ತಾಯಿಯು ಲೋಕದ ಮಹಾತಾಯಿ ಎಂದು ಕೊಂಡಾಡಲ್ಪಡುತ್ತಾಳೆ.