ವಿಜಯಪುರ: ಆಸ್ತಿ ಹಾಗೂ ಕೌಟುಂಬಿಕ ಕಲಹ ಹಿನ್ನೆಲೆ ನಾಲ್ವರು ಮಕ್ಕಳೊಂದಿಗೆ ಕಾಲುವೆಗೆ ತಾಯಿ ಹಾರಿದ ಪ್ರಕರಣದಲ್ಲಿ ಬುಧವಾರ ಮತ್ತೊಂದು ಮಗುವಿನ ಶವ ಪತ್ತೆಯಾಗಿದೆ. ಇದೊಂದಿಗೆ ನಾಲ್ವರೂ ಮಕ್ಕಳ ಮೃತದೇಹಗಳನ್ನು ಕಾಲುವೆಯಿಂದ ಹೊರತೆಗೆದಂತಾಗಿದೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಜನವರಿ 13ರಂದು ಭಾಗ್ಯಶ್ರೀ ನಿಂಗರಾಜ್ ಭಜಂತ್ರಿ ಎಂಬ ಮಹಿಳೆ ತನ್ನ ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಳು.
ಈ ಘಟನೆಯ ದಿನವೇ ತಾಯಿಯನ್ನು ಮೀನುಗಾರರು ರಕ್ಷಣೆ ಮಾಡಿದ್ದರು. ಅದೇ ದಿನ ಇಬ್ಬರು ಹೆಣ್ಣು ಮಕ್ಕಳಾದ ತನು(5) ರಕ್ಷಾ (3) ಶವಗಳೂ ಪತ್ತೆಯಾಗಿದ್ದವು. ಆದರೆ,
ಅವಳಿ ಮಕ್ಕಳಾದ 13 ತಿಂಗಳ ಹಸೇನ್ ಹಾಗೂ ಹುಸೇನ್ ಪತ್ತೆಯಾಗಿರಲಿಲ್ಲ.
ಹೀಗಾಗಿ ಮಕ್ಕಳ ಶವಕ್ಕಾಗಿ ಅಗ್ನಿಶಾಮಕ ದಳವು ಶೋಧ ಕಾರ್ಯದಲ್ಲಿ ತೊಡಗಿತ್ತು. ಅವಳಿ ಬಾಲಕರಲ್ಲಿ ಮಂಗಳವಾರ ಓರ್ವ ಮಗುವಿನ ಶವ ಪತ್ತೆಯಾಗಿತ್ತು.
ಮತ್ತೋರ್ವ ಮಗುವಿನ ಶವಕ್ಕಾಗಿ ಹುಡುಕಾಟ ಮುಂದುವರೆದಿತ್ತು.
ಇಂದು ಬೇನಾಳ ರಸ್ತೆಯ ಬಳಿಯ ಕಾಲುವೆಯಿಂದ ಎರಡು ಕಿಲೋ ಮೀಟರ್ ದೂರದಲ್ಲಿ ನಾಲ್ಕನೇ ಮಗುವಿನ ಮೃತದೇಹ ಪತ್ತೆಯಾಗಿದೆ. ನಿಡಗುಂದಿಯ ಸರ್ಕಾರಿ ಆಸ್ಪತ್ರೆಗೆ ಮಗುವಿನ ಶವವನ್ನು ಪೊಲೀಸರು ರವಾನಿಸಿದ್ದಾರೆ.















