ತಾಯಿಯೊಬ್ಬಳು ಮಗನ ಅಸಭ್ಯ ವರ್ತನೆ ಸಹಿಸಲಾಗದೆ ಕೊಂದು ಆತನನ್ನು ತುಂಡು ತುಂಡಾಗಿ ಕತ್ತರಿಸಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಫೆಬ್ರವರಿ 13ರಂದು ಲಕ್ಷ್ಮೀದೇವಿ ಎಂಬಾಕೆ ತನ್ನ 35 ವರ್ಷದ ಮಗ ಶ್ಯಾಂ ಪ್ರಸಾದ್ ಎಂಬುವವನನ್ನು ಹತ್ಯೆ ಮಾಡಿದ್ದಳು.
ಈ ಕುರಿತು ಪ್ರಕಾಶಂ ಪೊಲೀಸ್ ವರಿಷ್ಠಾಧಿಕಾರಿ ಎ.ಆರ್ ದಾಮೋದರ್ ಮಾಹಿತಿ ನೀಡಿದ್ದು, ಆಕೆಯ ಸಂಬಂಧಿಕರು ಈ ಅಪರಾಧಕ್ಕೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ತನ್ನ ಮಗತನ ವಿಕೃತ ಹಾಗೂ ಅನುಚಿತ ವರ್ತನೆಯಿಂದ ಹತಾಶೆಗೊಂಡು ಈ ನಿರ್ಧಾರ ಮಾಡಿದ್ದರು.
ಪ್ರಸಾದ್ ಖಮ್ಮಮ್, ಹೈದರಾಬಾದ್ ನಲ್ಲಿರುವ ಸಂಬಂಧಿಕರ ಬಳಿ ಕೆಟ್ಟಾಗಿ ನಡೆದುಕೊಂಡಿದ್ದ. ಹೈದರಾಬಾದ್ ಹಾಗೂ ನರಸರಾವ್ಪೇಟದಲ್ಲಿ ಇರುವ ತನ್ನ ತಾಯಿಯ ತಂಗಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆತನನ್ನು ಕೊಡಲಿ ಅಥವಾ ಹರಿತವಾದ ಆಯುಧವನ್ನು ಬಳಸಿ ಹತ್ಯೆ ಮಾಡಲಾಗಿದೆ, ಕೊಲೆಯ ನಂತರ ಆತನ ದೇಹವನ್ನು ಸಂಬಂಧಿಕರ ಸಹಾಯದಿಂದ ಕತ್ತರಿಸಿ ಕುಂಬಮ್ ಗ್ರಾಮದ ನಕಲಗಂಡಿ ಕಾಲುವೆಯಲ್ಲಿ ಎಸೆಯಲಾಗಿತ್ತು.
ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದು, ಸೆಕ್ಷನ್ 103(1) ಮತ್ತು 238ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾಲುವೆಯಲ್ಲಿ ಶ್ಯಾಮ್ನ ದೇಹದ ಭಾಗಗಳನ್ನು ಗೋಣಿ ಚೀಲಗಳಲ್ಲಿ ಎಸೆಯಲಾಗಿರುವುದನ್ನು ಸ್ಥಳೀಯರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಕೊಲೆ ಬೆಳಕಿಗೆ ಬಂದಿದೆ.
ಕಾಲುವೆಗೆ ಎಸೆದು ಬಳಿಕ ಏನೂ ಆಗಿಲ್ಲ ಎಂಬಂತೆ ಬಿಂಬಿಸಿದ್ದರು, ತಮ್ಮ ಮಗ ಶ್ಯಾಮ್ ಕಾಣೆಯಾಗಿದ್ದಾನೆ ಎಂದು ಕಾಲೋನಿ ನಿವಾಸಿಗಳಿಗೆ ತಿಳಿಸಿದರು. ಪೊಲೀಸರು ಶ್ಯಾಮ್ ಕುಟುಂಬ ಸದಸ್ಯರನ್ನು ಪ್ರಶ್ನಿಸಿದಾಗ, ಆರಂಭದಲ್ಲಿ ತಾಯಿಯೇ ಕೊಲೆ ಮಾಡಿದ್ದಾಳೆ ಎಂಬ ತೀರ್ಮಾನಕ್ಕೆ ಬಂದರು. ಮಾರ್ಕಪುರಂ ಡಿಎಸ್ಪಿ ನಾಗರಾಜು ಘಟನಾ ಸ್ಥಳವನ್ನು ಪರಿಶೀಲಿಸಿದರು. ಅವರು ಮೃತರ ದೇಹದ ಭಾಗಗಳನ್ನು ಎಸೆಯಲಾಗಿದ್ದ ಪ್ರದೇಶಕ್ಕೆ ಹೋಗಿ ಪರೀಕ್ಷಿಸಿದರು.
ಮದ್ಯದ ಚಟಕ್ಕೆ ಬಿದ್ದಿದ್ದ ಶ್ಯಾಮ್ ತನ್ನ ಮನೆಯಲ್ಲಿನ ಮಹಿಳೆಯರೊಂದಿಗೆ ದೌರ್ಜನ್ಯ ನಡೆಸುತ್ತಿದ್ದ ಮತ್ತು ಅವನ ಕುಟುಂಬ ಸದಸ್ಯರು ಈ ಕೊಲೆಗೆ ಕಾರಣರಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆಯ ನಂತರ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.














