ಪ್ರಕರಣವೊಂದರಲ್ಲಿ ಮರಣ ದಂಡನೆ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಮಾರ್ಪಡಿಸಿ ಇತ್ತೀಚೆಗೆ ಆದೇಶಿಸಿರುವ ಹೈಕೋರ್ಟ್ ಶಿಕ್ಷೆ ವಿಧಿಸುವಾಗ ಶಿಕ್ಷೆ ವಿಧಿಸುವಾಗ ವಿಚಾರಣಾಧೀನ ನ್ಯಾಯಾಲಯಗಳಿಗೆ ಭಾವನೆಗಳೇ ಪ್ರಧಾನವಾಗಬಾರದು ಎಂದು ಕಿವಿಮಾತು ಹೇಳಿದೆ.
ತಾಯಿಯನ್ನು ಕೊಲೆಗೈದಿದ್ದ ಪ್ರಕರಣವೊಂದರಲ್ಲಿ ಪುತ್ರನಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಸತ್ರ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತು. ಮರಣ ದಂಡನೆ ರದ್ದುಪಡಿಸಲು ಕೋರಿ ಅಪರಾಧಿ ತಿಮ್ಮಪ್ಪ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ಎಸ್ ರಾಚಯ್ಯ ಅವರ ನೇತೃತ್ವದ ವಿಭಾಗೀಯ ಪೀಠ ಮನವಿಯನ್ನು ಭಾಗಶಃ ಪುರಸ್ಕರಿಸಿದೆ.
ಜೀವಾವಧಿ ಶಿಕ್ಷೆ ಹಾಗೂ ₹ 25 ಸಾವಿರ ದಂಡ ವಿಧಿಸಿರುವ ನ್ಯಾಯಾಲಯವು, ‘ಒಂದು ವೇಳೆ ದಂಡ ಪಾವತಿಸದಿದ್ದರೆ ಪುನಾ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದೂ ಆದೇಶದಲ್ಲಿ ದಾಖಲಿಸಿದೆ.
ಅಪರಾಧವು ಕ್ರೌರ್ಯ ಹಾಗೂ ಪಾಶವೀತನದಿಂದ ಕೂಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಗಲ್ಲು ಶಿಕ್ಷೆ ವಿಧಿಸಲು ಭಾವನೆಗಳೇ ಪ್ರಭಾವಶಾಲಿ ಅಂಶಗಳಾಗಬಾರದು. ಗಲ್ಲು ಶಿಕ್ಷೆ ವಿಧಿಸುವಾಗ ಅಪರಾಧಿಕ ಹಿನ್ನೆಲೆಯೂ ಕೂಡ ಮುಖ್ಯವಾಗುತ್ತದೆ. ಈ ಪ್ರಕರಣದಲ್ಲಿ ಅಪರಾಧಿಯು ಗಂಭೀರ ಕ್ರಿಮಿನಲ್ ಹಿನ್ನೆಲೆಯುಳ್ಳವನು ಎನ್ನುವುದನ್ನು ನಿರೂಪಿಸಲಾಗಿಲ್ಲ. ಅಂತೆಯೇ, ಇದು ಇದು ಅಪರೂಪದಲ್ಲೇ ಅಪರೂಪ ಎನ್ನುವಂತಹ ಪ್ರಕರಣವಲ್ಲ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ʼಪತ್ನಿ ನನ್ನನ್ನು ತೊರೆದು ಹೋಗಲು ತಾಯಿಯೇ ಕಾರಣ..ʼ ಎಂದು ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯ ತಿಮ್ಮಪ್ಪ ತಾಯಿಯ ಜೊತೆ ವಾಗ್ವಾದ ನಡೆಸಿದ್ದ. ಈ ವೇಳೆ ಉದ್ವೇಗಕ್ಕೆ ಒಳಗಾಗಿದ್ದ ಆತ ತನ್ನ ತಾಯಿಯ ಕುತ್ತಿಗೆಗೆ ಮಚ್ಚಿನಿಂದ ಹೊಡೆದಿದ್ದ. ಆಕೆ ಶಿರಚ್ಛೇದನಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ತೀರ್ಮಾನಿಸಿದ್ದ ಚಿತ್ರದುರ್ಗದ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2018ರ ಜೂನ್ 2ರಂದು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.