ಮನೆ ರಾಜ್ಯ ಸಂಸದೆ ಸುಮಲತಾ ಭೇಟಿಯಾದ ಬಿ.ವೈ.ವಿಜಯೇಂದ್ರ

ಸಂಸದೆ ಸುಮಲತಾ ಭೇಟಿಯಾದ ಬಿ.ವೈ.ವಿಜಯೇಂದ್ರ

0

ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ.ಇತ್ತ ರಾಜಕೀಯ ಪಕ್ಷಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾದ ಬಳಿಕ ಮೌನಕ್ಕೆ ಜಾರಿರುವ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭೇಟಿ ಮಾಡಿದರು.

Join Our Whatsapp Group

ಈ ವೇಳೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ ಅವರು,ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ.ನನ್ನ ಅಸ್ತಿತ್ವ ಮಂಡ್ಯದಲ್ಲಿದೆ. ನನ್ನ ರಾಜಕೀಯ ನಡೆಯನ್ನು ಶೀಘ್ರವೇ ಮಂಡ್ಯದಲ್ಲಿಯೇ ಪ್ರಕಟಿಸಲಿದ್ದೇನೆ ಎಂದು ಅವರು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಕೆಲವು ವಿಚಾರ ಚರ್ಚೆ ಆಗಿದೆ.ಇಂದು ಮಂಡ್ಯ ಕಾರ್ಯಕರ್ತರ ಸಭೆ ಕರೆದಿದ್ದೇನೆ.ಅವರೊಂದಿಗೆ ಮಾತುಕತೆ ನಡೆಸಿ ಮುಂದಿನ ನನ್ನ ನಿರ್ಧಾರ ಸ್ವಂತ ಕ್ಷೇತ್ರದಲ್ಲಿಯೇ ತಿಳಿಸುತ್ತೇನೆ ಎಂದರು.

ಎಚ್‌ಡಿಕೆ ಭೇಟಿಗೆ ನನ್ನ ಆಕ್ಷೇಪಣೆ ಇಲ್ಲ:

ಸುಮಲತಾ ನನ್ನ ಮನೆಗೆ ಯಾರೇ ಬಂದರು ಸ್ವಾಗತ. ಅಂಬರೀಶ್ ಅವರ ಮನೆ ಎಂದಿನಂತೆ ಎಲ್ಲರನ್ನು ಸ್ವಾಗಿಸುತ್ತದೆ. ನಾನು ಸಹ ಎಲ್ಲರೊಂದಿಗೆ ಗೌರವದಿಂದ ನಡೆದುಕೊಳ್ಳುವೆ. ಯಾರೇ ಚರ್ಚೆಗೆ ಬಂದರೂ ಆಕ್ಷೇಪ ಇಲ್ಲ.ಬೇಟಿ ಮಾಡುವವರು ಮಾಡಬಹುದು ಎಂದು ಎಚ್‌ಡಿ ಕುಮಾರಸ್ವಾಮಿ ತಾವು ಸಂಸದರನ್ನು ಭೇಟಿ ಮಾಡುತ್ತೇನೆ ಎಂಬ ಹೇಳಿಕೆ ಕುರಿತ ಪ್ರಶ್ನೆಗೆ ಸುಮಲತಾ ಅವರು ಉತ್ತರಿಸಿದರು. ಮಂಡ್ಯ ಟಿಕೆಟ್ ನಿಮಗೆ ಸಿಕ್ಕಿಲ್ಲ, ಇಂದಿನ ಚರ್ಚೆ ವೇಳೆ ಬಿಜೆಪಿಯಿಂದ ಬೇರೆ ಯಾವುದಾದರೂ ಸ್ಥಾನ ಮಾನ ಸಿಗುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು, ನಾನು ಬೇರೆ ಯಾವುದನ್ನು ಕೇಳಿಲ್ಲ. ಆ ರೀತಿ ನಾನು ಕೇಳುವುದಿಲ್ಲ. ಮಂಡ್ಯ ನನ್ನ ಕ್ಷೇತ್ರ ಎಂದು ಸ್ಪಷ್ಟಪಡಿಸಿದರು. ವರಿಷ್ಠರ ಸೂಚನೆಯಂತೆ ನೀವು ಬಿಜೆಪಿಗೆ ಬೆಂಬಲಿಸಬೇಕಾದರೆ, ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತೀರಾ? ಪ್ರಶ್ನೆಗೆ, ಸದ್ಯ ನಾನು ಯಾವ ನಿರ್ಧಾರ ಕೈಗೊಂಡಿಲ್ಲ. ಈಗಲೇ ಎಲ್ಲವು ಹೇಳಲು ಆಗುವುದಿಲ್ಲ. ನಮ್ಮ ಕಾರ್ಯಕರ್ತರು, ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವೆ ಆಗ ಎಲ್ಲ ಪ್ರಶ್ನೆಗಳಿಗೆ ಅಂದು ಉತ್ತರ ಸಿಗಲಿದೆ ಎಂದು ಹೇಳಿದರು.

ಸುಮಲತಾ ಸಕಾರಾತ್ಮಕ ಸ್ಪಂದನೆ:

ಬಿವೈ ವಿಜಯೇಂದ್ರ ಬದಲಾದ ಮಂಡ್ಯ ರಾಜಕಾರಣದಲ್ಲಿ ಅಲ್ಲಿನ ಸಂಸದರಾದ ಸುಮಲತಾ ಅಂಬರೀಶ್ ಅವರ ಜೊತೆ ಚರ್ಚಿಸುವುದು ನನ್ನ ಕರ್ತವ್ಯ. ಅದರಂತೆ ನಾನು ಅವರೊಂದಿಗೆ ಕೆಲವು ವಿಚಾರಗಳ ಕುರಿತು ತಿಳಿಸಿದ್ದೇನೆ. ಇಲ್ಲಿ ಮನವೊಲಿಸುವ ಪ್ರಶ್ನೆ ಉದ್ಭವಿಸುದಿಲ್ಲ.ನಾನು ಬಿಜೆಪಿಗೆ ಅವರ ಸಹಕಾರ ಕೇಳಿದ್ದೇನೆ ಎಂದು ತಿಳಿಸಿದರು. ಸಂಸದೇ ಸುಮಲತಾ ಅವರು ಸಕಾರತ್ಮಕ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ರಾಜಕೀಯ ನಿರ್ಧಾರ ತಿಳಿಸಲಿದ್ದಾರೆ. ಈ ಬಗ್ಗೆ ಎಲ್ಲವು ಸರಿಹೋಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸುಮಲತಾ ಅವರು ನಮ್ಮೊಂದಿಗೆ ಇರುತ್ತಾರೆ. ಇಂದು ಅವರಿಗೆ ಟಿಕೆಟ್ ಸಿಗದಿರುವುದು ತಾತ್ಕಾಲಿಕ ಹಿನ್ನಡೆ ಎನ್ನಿಸಬಹುದು. ಆದರೆ ಅವರು ಬಿಜೆಪಿಗೆ ಶಕ್ತಿ ತುಂಬುವ ವಿಶ್ವಾಸ ಇದೆ.ಬಿಜೆಪಿ ವರಿಷ್ಠರು ಅವರಿಗೆ ವಿಶ್ವಾಸ ತುಂಬಿದ್ದಾರೆ. ನಿಮ್ಮ ಬೆಂಬಲ ಬೇಕು ಎಂದು ನಾವು ಕೇಳಿದ್ದೇವೆ ಎಂದು ಅವರು ಪ್ರತಿಕ್ರಿಯಿಸಿದರು.