ಮೈಸೂರು: ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ಸಂಸದ ಸ್ಥಾನದ ಅವಧಿ 2024ರಲ್ಲಿ ಕೊನೆಗೊಂಡ ನಂತರ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಲು ನಿರ್ಧಾರಿಸಿರುವುದಾಗಿ ಶ್ರೀನಿವಾಸ್ ಪ್ರಸಾದ್ ಅವರು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಬುಧವಾರ ಪಕ್ಷದ ಅಭ್ಯರ್ಥಿ ಸಿ ಎಸ್ ನಿರಂಜನ್‌ಕುಮಾರ್ ಪರ ಪ್ರಚಾರ ನಡೆಸಿದ ಶ್ರೀನಿವಾಸ್ ಪ್ರಸಾದ್ ಅವರು, ತಾವು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.
2013ರ ವಿಧಾನಸಭೆ ಚುನಾವಣೆ ತನ್ನ ಕೊನೆಯ ಚುನಾವಣೆ ಎಂದು ಈ ಹಿಂದೆ ಶ್ರೀನಿವಾಸ್ ಪ್ರಸಾದ್ ಅವರು ಘೋಷಿಸಿದ್ದರು. ಆದರೆ 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು, ಕಂದಾಯ ಸಚಿವ ಸ್ಥಾನದಿಂದ ಕೈಬಿಟ್ಟಾಗ ಅವರು ಕಾಂಗ್ರೆಸ್ ಗೆ ವಿದಾಯ ಹೇಳಿ ಬಿಜೆಪಿ ಸೇರಿದ್ದರು.
2017ರಲ್ಲಿ ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ, 2019 ರಲ್ಲಿ ಚಾಮರಾಜನಗರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.