ಬೆಂಗಳೂರು: ಸಂಸತ್ ಭದ್ರತಾ ಲೋಪ ಕುರಿತು ಇಲ್ಲಿವರೆಗೂ ಮೌನ ವಹಿಸಿದ ಸಂಸದ ಪ್ರತಾಪ್ ಸಿಂಹ, ಭಾನುವಾರ ಪತ್ರಕರ್ತರೊಂದಿಗೆ ಆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ರಾಜ್ಯ ಕಾಂಗ್ರೆಸ್, ಬ್ಯಾರಿಕೆಡ್ ವೀರ ಪ್ರತಾಪ್ ಸಿಂಹ ಅವರೇ, ಅಕ್ರಮಗಳನ್ನೆಸಗಿ ದೇವರ ಹೆಸರಲ್ಲಿ ಇನ್ನೆಷ್ಟು ದಿನ ರಕ್ಷಣೆ ಪಡೆಯುತ್ತೀರಿ? ಎಂದು ಪ್ರಶ್ನಿಸಿದೆ.
ತಾವು ಹೊಣೆಗಾರಿಕೆಯ ಸ್ಥಾನ ಹೊಂದಿರುವ ಸಂಸತ್ ಸದಸ್ಯ, ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತಿಗೆ ಪರಮೋಚ್ಚ ಸ್ಥಾನವಿದೆ.ಅಂತಹ ಸಂಸತ್ತಿನಲ್ಲಿ ಮಾಡಿದ ತಪ್ಪಿನ ಬಗ್ಗೆ ಹೇಳಿಕೆ ನೀಡುವುದು ಸಂಸತ್ ಸದಸ್ಯನ ಕರ್ತವ್ಯ. ಅದನ್ನು ಬಿಟ್ಟು ದೇವರಿಗೆ ಗೊತ್ತಿದೆ, ದಿಂಡರಿಗೆ ಗೊತ್ತಿದೆ ಎನ್ನುವುದಾರೆ ಸಂಸತ್ ಇರುವುದೇಕೆ? ತನಿಖಾ ಸಂಸ್ಥೆಗಳೇಕೆ? ಸಂಸತ್ತಿನಲ್ಲಿ ಉತ್ತರಿಸುವುದೆಂದರೆ ಈ ದೇಶದ ಹಾಗೂ ತಮ್ಮ ಕ್ಷೇತ್ರದ ಜನತೆಗೆ ಉತ್ತರಿಸಿದಂತೆ ಎಂಬ ಮಿನಿಮಮ್ ಕಾಮನ್ ಸೆನ್ಸ್ ಇಲ್ಲದ ವ್ಯಕ್ತಿ ಸಂಸತ್ ಸದಸ್ಯನಾಗಿದ್ದು ದುರಂತ ಎಂದಿದೆ.
ಮೈಸೂರು, ಕೊಡಗಿನ ಜನತೆ ಇನ್ನೊಮ್ಮೆ ಆ ದುರಂತವನ್ನು ಮರುಕಳಿಸಲು ಬಿಡುವುದಿಲ್ಲ. ಬೇರೆಯವರ ಬಗ್ಗೆ ಪುಂಖಾನುಪುಂಖವಾಗಿ ಬರೆದು ತಾನೊಬ್ಬ ಮಹಾನ್ ಬರಹಗಾರ ಎನ್ನುವ ಪ್ರತಾಪ್ ಸಿಂಹ ಇಂದು ಜನತೆಗೆ, ಪತ್ರಕರ್ತರಿಗೆ ಉತ್ತರ ನೀಡಲಾಗದೆ ತಮ್ಮದೇ ಬೆತ್ತಲೆ ಜಗತ್ತಿನಲ್ಲಿ ತಾನೇ ಬೆತ್ತಲಾಗಿ ನಿಂತಿದ್ದಾರೆ ಎಂದು ಲೇವಡಿ ಮಾಡಿದೆ.
ಇತರರ ಬಗ್ಗೆ ತಮ್ಮ ಕೊಳಕು ನಾಲಿಗೆಯನ್ನು ಝಳಪಿಸುವ ಪ್ರತಾಪ್ ಸಿಂಹ ಸಂಸತ್ ದಾಳಿಯ ಬಗ್ಗೆ ಮಾತನಾಡುವಾಗ ಅವರ ನಾಲಿಗೆ ಬಿದ್ದುಹೋಗಿದ್ದೇಕೆ? ಜನತೆಗೆ ಉತ್ತರಿಸಬೇಕಾದ ಪ್ರಶ್ನೆಗಳು ಇಷ್ಟೇ, ಸಂಸತ್ ದಾಳಿಕೋರರಿಗೆ 3 ಬಾರಿ ಪಾಸ್ ನೀಡಿದ್ದೇಕೆ? ದಾಳಿಕೋರರಿಗೂ ಪ್ರತಾಪ್ ಸಿಂಹರಿಗೂ ಇರುವ ಸಂಬಂಧವೇನು? ಪಾಸ್ ನೀಡಿದವರ ಬಗ್ಗೆ ತನಿಖೆ ಮಾಡುತ್ತಿಲ್ಲವೇಕೆ? ಮಿಸ್ಟರ್ ಪಲಾಯನವಾದಿ ಪ್ರತಾಪ್ ಸಿಂಹ, ಈ ಪ್ರಶ್ನೆಗಳಿಗೆ ಉತ್ತರಿಸಿ ನಿಮ್ಮ ಪ್ರತಾಪ ತೋರಿಸಿ ಎಂದು ಟೀಕಾ ಪ್ರಹಾರ ನಡೆಸಿದೆ.