ಮನೆ ಮನರಂಜನೆ ಬಹುನಿರೀಕ್ಷಿತ ‘ಪುಷ್ಪ 2’ ಚಿತ್ರಕ್ಕೆ ಪ್ರಶಂಸೆಯ ಮಳೆ

ಬಹುನಿರೀಕ್ಷಿತ ‘ಪುಷ್ಪ 2’ ಚಿತ್ರಕ್ಕೆ ಪ್ರಶಂಸೆಯ ಮಳೆ

0

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ಪುಷ್ಪ 2: ದಿ ರೂಲ್’ ಇಂದು ವಿಶ್ವದಾದ್ಯಂತ ತೆರೆಗೆ ಬಂದಿದ್ದು, ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿದೆ. ಸಿನಿಮಾ ನೋಡಿದ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ವಿಮರ್ಶಕರು ಟ್ವಿಟರ್​ನಲ್ಲಿ ತಮ್ಮ ವಿಮರ್ಶೆ ನೀಡಿದ್ದಾರೆ.

Join Our Whatsapp Group

ಚಿತ್ರದ ನಿರ್ದೇಶನ, ಆ್ಯಕ್ಟಿಂಗ್​, ಆ್ಯಕ್ಷನ್, ಪ್ರದರ್ಶನಗಳು, ಸಂಗೀತ ಮತ್ತು ಸಂಕಲನವನ್ನು ಬಹುವಾಗಿ ಶ್ಲಾಘಿಸಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರ, ಕೆಂಪು ಚಂದನದ ಕಳ್ಳಸಾಗಾಣಿಕೆ ಸಾಮ್ರಾಜ್ಯದ ಮೇಲಿನ ಯುದ್ಧದಲ್ಲಿ ಮತ್ತೊಮ್ಮೆ ಎಸ್ಪಿ ಬನ್ವರ್ ಸಿಂಗ್ ಶೆಕಾವತ್ (ಫಹಾದ್ ಫಾಸಿಲ್) ಅವರನ್ನು ಎದುರಿಸುವ ಪುಷ್ಪ ರಾಜ್ (ಅಲ್ಲು ಅರ್ಜುನ್) ಅವರ ಸಾಹಸಗಾಥೆಯನ್ನು ಮುಂದುವರೆಸಿದೆ.

ಬಹುತೇಕ ಮೆಚ್ಚುಗೆಗಳ ಸುರಿಮಳೆ: ಪುಷ್ಪ 2ರ ಆರಂಭಿಕ ವಿಮರ್ಶೆ ಬಹತೇಕ ಮೆಚ್ಚುಗೆಗಳಿಂದಲೇ ಕೂಡಿದೆ. ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಮಿಗಳು ಚಿತ್ರದ ರೋಮಾಂಚಕ ಸಾಹಸ ದೃಶ್ಯಗಳ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಕೂಡಾ ಪ್ರಶಂಸೆ ಕೊಟ್ಟಿದ್ದು, ಚಿತ್ರಕ್ಕೆ 5ರಲ್ಲಿ 4.5 ಸ್ಟಾರ್ಸ್ ನೀಡಿದ್ದಾರೆ. ಪುಷ್ಪಾ 2 ಅನ್ನು ‘ಮೆಗಾ – ಬ್ಲಾಕ್‌ಬಸ್ಟರ್’ ಎಂದು ಬಣ್ಣಿಸಿದ್ದಾರೆ. ನಿರ್ದೇಶಕರ ನಿರ್ದೇಶನಾ ಶೈಲಿಯನ್ನು ಶ್ಲಾಘಿಸಿದರು. ಅಲ್ಲು ಅರ್ಜುನ್‌ ಪುಷ್ಪ ರಾಜ್‌ ಪಾತ್ರವನ್ನು ನಿಭಾಯಿಸಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಅತ್ಯದ್ಭುತ ಎಂದು ಉಲ್ಲೇಖಿಸಿದ್ದಾರೆ.

ಜಾತ್ರಾ ಸೀನ್​ ಗೆ ಜನರ ಬಹುಪರಾಕ್​: ಚಿತ್ರದ ಹೈ-ಆಕ್ಟೇನ್ ಆಕ್ಷನ್ ಅನ್ನು ಹೈಲೆಟ್​ ಮಾಡಿದ್ದಾರೆ. ವಿಶೇಷವಾಗಿ ಬಹು ನಿರೀಕ್ಷಿತ ಜಾತ್ರಾ ಸೀನ್​ ಅನ್ನು ಹೊಗಳಿದ್ದಾರೆ. ಈಗಾಗಲೇ ಈ ಸೀನ್​ ಅಭಿಮಾನಿಗಳು ಹೆಚ್ಚು ಚರ್ಚಿಸಿರುವ ವಿಷಯವಾಗಿ ಮಾರ್ಪಟ್ಟಿದೆ. ಎಕ್ಸ್​ನಲ್ಲಿ, ಅಭಿಮಾನಿಗಳು ಈ ಸೀನ್​​ ‘ದಶಕಗಳ ಕಾಲ ನೆನಪಿನಲ್ಲಿ ಉಳಿಯಲಿದೆ’ ಎಂಬುದನ್ನು ದೃಢಪಡಿಸಿದರು. ಅಲ್ಲು ಅರ್ಜುನ್ ಅವರ ಅಭಿನಯ ಸಾಕಷ್ಟು ಮೆಚ್ಚುಗೆ ಸ್ವೀಕರಿಸುತ್ತಿದ್ದು, ಅನೇಕರು ಅವರನ್ನು ‘ಗಾಡ್​ ಲೆವೆಲ್ ಪರ್ಫಾಮರ್’ ಎಂದು ಕರೆದಿದ್ದಾರೆ. ಅಲ್ಲದೇ ನಟ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುವ ಹಾದಿಯಲ್ಲಿದ್ದಾರೆ ಎಂದು ಬಹುತೇಕರು ಊಹಿಸಿದ್ದಾರೆ.

ಪುಷ್ಪ 2ನ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ಅದು ಚಿತ್ರದ ವೇಗ. ಸಂಕಲನಕಾರ ನವೀನ್ ನೂಲಿ ಅವರ ಎಡಿಟಿಂಗ್​ಗೆ ಶ್ಲಾಘನೆ ವ್ಯಕ್ತವಾಗಿದೆ. ಸಿನಿಮಾ ಲಾಂಗ್​ ರನ್​ ಟೈಮ್​ ಹೊಂದಿದ್ದರೂ, ಕಥೆ ಪ್ರಾರಂಭದಿಂದ ಕೊನೆಯವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪುಷ್ಪ 2 ಅನ್ನು ‘ವೈಲ್ಡ್​​ಫೈಯರ್ ಬ್ಲಾಕ್​​​ಬಸ್ಟರ್​’ ಎಂದು ಉಲ್ಲೇಖಿಸಿದ್ದಾರೆ. ಕೆಲವರು ಚಿತ್ರವು ‘ಎಲ್ಲಾ ದಾಖಲೆಗಳನ್ನು ಮುರಿಯಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ.

ತುಂಬಾ ತುಂಬಾ ಸರಳವಾಗಿದೆ ಕಥೆ: “ಕಥೆ ತುಂಬಾ ಸರಳವಾಗಿದೆ, ಆದ್ರೆ ಸಿನಿಮಾ ರವಾನಿಸಿದ ರೀತಿ ಅದ್ಭುತ. ಅಲ್ಲು ಅರ್ಜುನ್ ಅವರದ್ದು ಅದ್ಭುತ ಅಭಿನಯ, ಕ್ಲೈಮ್ಯಾಕ್ಸ್ ಫೈಟ್ ಮ್ಯಾಡ್​ನೆಸ್​ ಎನ್ನಬಹುದು, ಥಿಯೇಟರ್‌ನಲ್ಲಿ ವೀಕ್ಷಿಸಬೇಕಾದ ಸಿನಿಮಾ” ಎಂದು ಎಕ್ಸ್​ ಬಳಕೆದಾರರೋರ್ವರು ತಿಳಿಸಿದ್ದಾರೆ.

ಅಲ್ಲು ಅರ್ಜುನ್ ಅವರ ಮ್ಯಾಗ್ನೆಟಿಕ್​ ಪ್ರೆಸೆನ್ಸ್​ ಜೊತೆಗೆ, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಸುನೀಲ್, ಅನಸೂಯಾ ಭಾರದ್ವಾಜ್, ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಪುಷ್ಪ ರಾಜ್ ತೀವ್ರ ಘರ್ಷಣೆಗಳ ನಡುವೆ ಅಧಿಕಾರಕ್ಕೇರುವುದನ್ನು ಇಲ್ಲಿ ಕಾಣಬಹುದಾಗಿದೆ.

ಆನ್‌ಲೈನ್​ನಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಗಮನಿಸಿದರೆ, ಪುಷ್ಪ 2 ಅಭಿಮಾನಿಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದ್ದನ್ನು ಕೊಟ್ಟಿದೆ ಎಂಬುದು ಸ್ಪಷ್ಟವಾಗಿದೆ. ಸುಕುಮಾರ್ ಅವರ ನಿರ್ದೇಶನ, ಅಲ್ಲು ಅರ್ಜುನ್ ಅವರ ಪವರ್‌ಫುಲ್​ ಆ್ಯಕ್ಟಿಂಗ್​​, ಚಿತ್ರದ ನಿರೂಪಣೆ ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ.