ಮನೆ ಸ್ಥಳೀಯ ಮುಡಾ ಹಗರಣ: ಮಾಜಿ ಆಯುಕ್ತ ಡಿ.ಬಿ.ನಟೇಶ್ ವಿರುದ್ಧ ದೂರು ದಾಖಲು

ಮುಡಾ ಹಗರಣ: ಮಾಜಿ ಆಯುಕ್ತ ಡಿ.ಬಿ.ನಟೇಶ್ ವಿರುದ್ಧ ದೂರು ದಾಖಲು

0

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆರೋಪಕ್ಕೆ ಹೊಸ ತಿರುವು ಎಂಬಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ.

Join Our Whatsapp Group

ನಟೇಶ್‌ ಅವರು 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಮೂಲಕ ಅಕ್ರಮವಾಗಿ ಗಳಿಸಿದ ಹಣವನ್ನು ಪತ್ನಿ ರಶ್ಮಿ ಹೆಸರಿನಲ್ಲಿ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದು, ಆ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಹೇಳಿದ್ದಾರೆ.

‘ರಶ್ಮಿ ಅವರು ಬ್ಲೂಸ್ಟೋನ್‌, ವಿಪಾಸನ ಹೆಲ್ತ್‌ ಕೇರ್, ಅಕುನೋವ ಹೆಲ್ತ್‌ ಕೇರ್‌ ಎಂಬ ಕಂಪನಿಗಳಲ್ಲಿ ನಿರ್ದೇಶಕಿಯಾಗಿದ್ದಾರೆ. ಬ್ಲೂಸ್ಟೋನ್‌ ಸಂಸ್ಥೆಯು ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯಲ್ಲಿ 2020ರಲ್ಲಿ ರೂ.64.75 ಲಕ್ಷ ಮೊತ್ತಕ್ಕೆ 1 ಎಕರೆ 30 ಗುಂಟೆ ಜಮೀನು ಖರೀದಿಸಿದೆ.

ಅದೇ ಸಂಸ್ಥೆಯ ಮೂಲಕ 2022ರಲ್ಲಿ ಮೈಸೂರು ನಗರದ ಬೋಗಾದಿಯಲ್ಲಿ ರೂ.44.99 ಲಕ್ಷ ಮೌಲ್ಯದ ಫ್ಲ್ಯಾಟ್‌ ಖರೀದಿಸಲಾಗಿದೆ. ನಟೇಶ್‌ ಅವರೇ ಬೇನಾಮಿ ಹೆಸರಿನಲ್ಲಿ ಅಕ್ರಮ ಹೂಡಿಕೆ ಮಾಡಿರುವ ಸಾಧ್ಯತೆ ಇದ್ದು, ತನಿಖೆಗೆ ಒಳಪಡಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಅವರು, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್‌ಆರ್ ಮಹದೇವಸ್ವಾಮಿ ಸೇರಿದಂತೆ ಹಲವು ಬಿಜೆಪಿ ನಾಯಕರು ಮತ್ತು ಅವರ ಕುಟುಂಬದ ಸದಸ್ಯರು ಕೂಡ ಈ ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆಂದು ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಜಾರಿ ನಿರ್ದೇಶನಾಲಯದಲ್ಲಿಯೂ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಈ ಹೇಳಿಕೆ ಮುಡಾ ವಿರುದ್ಧ ಧ್ವನಿ ಎತ್ತಿರುವ ಬಿಜೆಪಿಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ.