ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜನ ಪ್ರತಿನಿಧಿಗಳ ಕೋರ್ಟ್ ತನಿಖೆಗೆ ಆದೇಶ ನೀಡಿದ್ದು ಶುಕ್ರವಾರ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಿಆರ್‌ಪಿಸಿ ಅಡಿಯಲ್ಲಿ ತನಿಖೆ ನಡೆಸುವಂತೆ ಮೈಸೂರು ಲೋಕಾಯುಕ್ತಕ್ಕೆ ಕೋರ್ಟ್ ಆದೇಶ ನೀಡಿತ್ತು.
ಆದರೆ ಇಂದು ಅಧಿಕೃತವಾಗಿ ಮೈಸೂರು ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಎಸ್‌ಪಿ ಉದೇಶ್ ಅವರು ಐಪಿಸಿ ಸೆಕ್ಷನ್ ಐಪಿಸಿ ಸೆಕ್ಷನ್ 120B, 166, 403, 420, 426, 465, 468, 340, 351 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರಿನ ಆಧಾರದ ಮೇಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಗೆ ನ್ಯಾಯಾಲಯವೂ ಐಪಿಸಿ ಸೆಕ್ಷನ್ ಭ್ರಷ್ಟಾಚಾರ ತಡೆ ಕಾಯ್ದೆ (1988ರ ), ಬೇನಾಮಿ ವಹಿವಾಟು ಕಾಯ್ದೆ ಹಾಗೂ ಭೂ ಕಬಳಿಕೆ ನಿರ್ಬಂಧ ಕಾಯ್ದೆಯಡಿಯಲ್ಲಿ ಲೋಕಾಯುಕ್ತ ಎಸ್‌ಪಿ ಎಫ್‌ಐಆರ್ ದಾಖಲಿಸಿದ್ದಾರೆ.
ಇದರಲ್ಲಿ A1 ಆರೋಪಿ ಸಿಎಂ ಸಿದ್ದರಾಮಯ್ಯ, A2 ಆರೋಪಿ ಪತ್ನಿ ಪಾರ್ವತಿ ಸಿದ್ದರಾಮಯ್ಯ, A3 ಆರೋಪಿ ಭಾವಮೈದಾ ಮಲ್ಲಿಕಾರ್ಜುನಸ್ವಾಮಿ ಮತ್ತು A4 ಆರಫಿ ಭೂ ಮಾಲೀಕ ಎನ್ನಲಾದ ಜೆ.ದೇವರಾಜು ಎಂಬುವವರ ವಿರುದ್ಧ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಮುಡಾ ಪ್ರಕರಣದಲ್ಲಿ ದೂರುದಾರ ಖಾಸಗಿ ದೂರು ನೀಡಿದ ಬಳಿಕ ಗುರುವಾರ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯವು ಮೈಸೂರು ಲೋಕಾಯುಕ್ತಕ್ಕೆ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಈ ಆದೇಶದ ನಂತರ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಪ್ರಧಾನ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕೊನೆಗೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಮಾರ್ಗದರ್ಶನದಲ್ಲಿ ಎಸ್‌ಪಿ ಉದೇಶ್ ಅವರ ನೇತೃತ್ವದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.