ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿರುವ ಅರ್ಜಿಯಲ್ಲಿ ಆರೋಪಗಳ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ.
ಜುಲೈ 27ರಂದೇ ನೋಟಿಸ್ ಕಳುಹಿಸಲಾಗಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ನೋಟಿಸ್‌ಗೆ ವಿವರಣೆ ನೀಡುವ ಬಗ್ಗೆ ಹಾಗೂ ಸರ್ಕಾರದ ಮುಂದಿನ ಹೆಜ್ಜೆಯ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ನೋಟಿಸ್‌ಗೆ ಸಂಬಂಧಿಸಿದ ವಿಚಾರ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಹೊರಗುಳಿಯಲಿದ್ದಾರೆ. ಹಿರಿಯ ಸಚಿವರೊಬ್ಬರು ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ, ಸರ್ಕಾರದ ತೀರ್ಮಾನ ಹೊರಬೀಳಲಿದೆ.
ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ಅನುಮತಿ ಕೋರಿ ವಕೀಲ ಟಿ.ಜೆ. ಅಬ್ರಹಾಂ ಅವರು 22 ಪುಟಗಳ ಅರ್ಜಿಯನ್ನು ಜುಲೈ 26ರಂದು ರಾಜ್ಯಪಾಲರಿಗೆ ಸಲ್ಲಿಸಿದ್ದರು.
ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮ ನಡೆಸಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ₹55.80 ಕೋಟಿ ನಷ್ಟವಾಗಿದೆ. ಈ ಬಗ್ಗೆ ತನಿಖೆಗಾಗಿ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ 7, 9, 11, 12 ಮತ್ತು 13ನೇ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಭಾರತೀಯ ನ್ಯಾಯಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಅಗತ್ಯವಿದೆ’ ಎಂದು ಅರ್ಜಿಯಲ್ಲಿ ಅಬ್ರಹಾಂ ವಿವರಿಸಿದ್ದರು.
ಅಬ್ರಹಾಂ ಅವರಿಂದ ಒಂದೂವರೆ ಗಂಟೆ ವಿವರಣೆ ಪಡೆದಿದ್ದ ರಾಜ್ಯಪಾಲರು, ಕೆಲವು ವಿಷಯಗಳಲ್ಲಿ ಮತ್ತಷ್ಟು ಸ್ಪಷ್ಟನೆ ಕೇಳಿದ್ದರು. ಪೂರಕ ದಾಖಲೆಯನ್ನು ಅಂದು ಸಂಜೆಯೊಳಗೆ ಸಲ್ಲಿಸುವಂತೆಯೂ ಸೂಚಿಸಿದ್ದರು. ದಾಖಲೆಗಳನ್ನು ಕಾನೂನು ತಜ್ಞರಿಗೆ ಕಳುಹಿಸಿದ್ದ ರಾಜ್ಯಪಾಲರು, ಈ ಬಗ್ಗೆ ಮುಂದೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಿದ್ದರು ಎಂದು ಹೇಳಲಾಗಿತ್ತು.
ಸಿದ್ದರಾಮಯ್ಯ ವಿರುದ್ಧ ಜುಲೈ 18ರಂದು ಮೈಸೂರು ಲೋಕಾಯುಕ್ತ ಪೊಲೀಸರ ಮುಂದೆ, ಅಬ್ರಹಾಂ ದೂರು ದಾಖಲಿಸಿದ್ದರು. ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿ ಅಗತ್ಯವಿದೆ. ಈ ಕಾರಣಕ್ಕಾಗಿ, ಅಬ್ರಹಾಂ ರಾಜ್ಯಪಾಲರ ಮೊರೆ ಹೋಗಿದ್ದರು.
ಮುಖ್ಯಮಂತ್ರಿ ವಿರುದ್ಧ ವೈಯಕ್ತಿಕವಾಗಿ ದೂರು ಸಲ್ಲಿಕೆಯಾದಾಗ, ಅದರ ಬಗ್ಗೆ ಪತ್ರ ಅಥವಾ ನೋಟಿಸ್ ಮೂಲಕ ವಿವರಣೆ ಕೇಳುವುದು ಸಾಮಾನ್ಯ. ಆ ಪ್ರಕ್ರಿಯೆ ಭಾಗವಾಗಿಯೇ, ಅರ್ಜಿಗಳಲ್ಲಿ ಉಲ್ಲೇಖಿಸಲಾದ ಆರೋಪಗಳಿಗೆ ಸ್ಪಷ್ಟನೆ ನೀಡುವಂತೆ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಈ ಮಧ್ಯೆಯೇ, ಸಿದ್ದರಾಮಯ್ಯ ಅವರು ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಗೆ ಸಂಪುಟ ಸಹೋದ್ಯೋಗಿಗಳಿಗೆ ಉಪಾಹಾರ ಕೂಟ ಏರ್ಪಡಿಸಿದ್ದಾರೆ. ಈ ವೇಳೆಯಲ್ಲಿಯೂ ಮುಡಾ ವಿಚಾರ ಮತ್ತು ರಾಜ್ಯಪಾಲರ ನಡೆಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.
ಎರಡು ದಿನಗಳ ದೆಹಲಿ ಪ್ರವಾಸ ತೆರಳಿದ್ದ ಮುಖ್ಯಮಂತ್ರಿ, ನಗರಕ್ಕೆ ಬುಧವಾರ ಸಂಜೆ ವಾಪಸಾಗಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿರುವ ಮುಖ್ಯಮಂತ್ರಿ, ಮುಡಾ ವಿಚಾರವೂ ಸೇರಿದಂತೆ ರಾಜ್ಯ ರಾಜಕೀಯದಲ್ಲಿನ ಸದ್ಯದ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದರು.