ಬೆಂಗಳೂರು, ಡಿಸೆಂಬರ್ 5: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಗುರುವಾರ ನಡೆಯಿತು. ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜನವರಿ 25ಕ್ಕೆ ನಿಗದಿಪಡಿಸಿದೆ.
ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಅಡಿ ಮುಖ್ಯಮಂತ್ರಿಯವರ ವಿರುದ್ಧ ತನಿಖೆಗೆ ಅನುಮತಿಸಲು ರಾಜ್ಯಪಾಲರಿಗೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠದ ಮುಂದೆ ರಾಜ್ಯ ಸರ್ಕಾರ ಪ್ರಬಲವಾಗಿ ವಾದ ಮಂಡಿಸಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯಪಾಲರು ಅನುಮತಿಸಿರುವುದನ್ನು ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಆದೇಶದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯೂ ಸೇರಿದಂತೆ ಭೂ ಮಾಲೀಕ ಜೆ ದೇವರಾಜು ಸಲ್ಲಿಸಿರುವ ಮೇಲ್ಮನವಿ ಹಾಗೂ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠವು ಗುರುವಾರ ನಡೆಸಿತು. ರಾಜ್ಯಪಾಲರು ಸೇರಿ ಎಲ್ಲಾ ಪ್ರತಿವಾದಿಗಳಿಗೆ ಈ ಪ್ರಕರಣಗಳಲ್ಲಿ ನೋಟಿಸ್ ಜಾರಿ ಮಾಡಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಮುಡಾ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ರಾಜ್ಯ ಸರ್ಕಾರವು ತನ್ನ ಮೇಲ್ಮನವಿಯಲ್ಲಿ ಪ್ರಮುಖವಾಗಿ ಪ್ರಶ್ನಿಸಿದೆ. ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು “ಈ ಪ್ರಕರಣದಲ್ಲಿ ತನಿಖೆಗೆ ಅನುಮತಿಸುವ ಸಕ್ಷಮ ಪ್ರಾಧಿಕಾರದ ವಿಚಾರವು ಮಹತ್ವದ ಸಾಂವಿಧಾನಿಕ ವಿಚಾರವಾಗಿದೆ. ಇದು ಯಾವುದೇ ಪಕ್ಷದ ಮುಖ್ಯಮಂತ್ರಿ, ಮಂತ್ರಿಗೆ ಸಂಬಂಧಿಸಿದ್ದಲ್ಲ. ಈ ರೀತಿ ಮುಖ್ಯಮಂತ್ರಿ, ಸಚಿವರ ವಿರುದ್ಧ ತನಿಖೆಗೆ ಅನುಮತಿಸುತ್ತಾ ಹೋದರೆ ಅರಾಜಕತೆ ಸೃಷ್ಟಿಯಾಗಲಿದೆ. ಇದು ನಮ್ಮ ದೇಶದ ರಾಜ್ಯಾಡಳಿತಕ್ಕೆ ಸಂಬಂಧಿಸಿದ್ದಾಗಿದೆ. ಇಲ್ಲಿ ಬಹುಮುಖ್ಯವಾದ ಸಾಂವಿಧಾನಿಕ ವಿಚಾರಗಳು ಅಡಕವಾಗಿವೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಅಡಿ ಮುಖ್ಯಮಂತ್ರಿಯ ವಿರುದ್ಧ ತನಿಖೆಗೆ ಅನುಮತಿಸಲು ರಾಜ್ಯಪಾಲರಿಗೆ ವ್ಯಾಪ್ತಿಯೇ ಇಲ್ಲ” ಎಂದು ವಿವರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರು “ರಾಜ್ಯಪಾಲರ ಅನುಮತಿಯನ್ನು ಎತ್ತಿ ಹಿಡಿಯುವ ಮೂಲಕ ಏಕಸದಸ್ಯ ಪೀಠವು ಪ್ರಮಾದ ಎಸಗಿದೆ” ಎಂದು ವಿವರಿಸಲು ಮುಂದಾದರು. ಆದರೆ ಇದಕ್ಕೆ ಪೀಠವು ಅನುಮತಿಸಲಿಲ್ಲ.
ಹಿರಿಯ ವಕೀಲರಾದ ಡಾ. ಅಭಿಷೇಕ ಮನುಸಿಂಘ್ವಿ ಮತ್ತು ಪ್ರೊ. ರವಿವರ್ಮ ಕುಮಾರ್ (ಮುಖ್ಯಮಂತ್ರಿ ಪ್ರತಿನಿಧಿಸಿರುವವರು), ಕಪಿಲ್ ಸಿಬಲ್ ಮತ್ತು ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ (ರಾಜ್ಯ ಸರ್ಕಾರ ಪ್ರತಿನಿಧಿಸಿರುವವರು), ಕೆ ಜಿ ರಾಘವನ್ ಮತ್ತು ಮಣೀಂದರ್ ಸಿಂಗ್ (ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿನಿಧಿಸಿರುವವರು), ದುಷ್ಯಂತ್ ದವೆ (ಜೆ ದೇವರಾಜು ಪ್ರತಿನಿಧಿಸಿರುವವರು) ಅವರ ವಾದ-ಪ್ರತಿವಾದವನ್ನು ನ್ಯಾಯಾಲಯ ಆಲಿಸಿತು. ಆನಂತರ ಸಿಎಂ ಸಿದ್ದರಾಮಯ್ಯ ಮತ್ತು ಜೆ ದೇವರಾಜು ಅವರು ಸಲ್ಲಿಸಿರುವ ಪ್ರತ್ಯೇಕ ಮೇಲ್ಮನವಿಗಳಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಮತ್ತು ದೂರುದಾರರಾದ ಟಿ ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಎಸ್ ಪಿ ಪ್ರದೀಪ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯಲ್ಲಿ ನೋಟಿಸ್ ಆಗಿರುವುದನ್ನು ಪ್ರಶ್ನಿಸಿ ಜೆ ದೇವರಾಜು ಸಲ್ಲಿಸಿರುವ ಮತ್ತೊಂದು ಮೇಲ್ಮನವಿಯಲ್ಲಿ ಸ್ನೇಹಮಯಿ ಕೃಷ್ಣ, ಕೇಂದ್ರ ಗೃಹ ಇಲಾಖೆ, ಸಿಬಿಐ, ಲೋಕಾಯುಕ್ತ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಸಹೋದರ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು 2025ರ ಜನವರಿ 25ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ, ಮುಡಾ ಪ್ರಕರಣದಲ್ಲಿ ವಿವಾದದ ಕೇಂದ್ರವಾಗಿರುವ ಕೆಸರೆ ಗ್ರಾಮದಲ್ಲಿನ ಜಾಮೀನಿನ ಮಾಲೀಕ ಜೆ ದೇವರಾಜು ಪ್ರತಿನಿಧಿಸಿರುವ ಹಿರಿಯ ವಕೀಲ ದುಷ್ಯಂತ್ ದವೆ ಅವರು “ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿರುವ ಅರ್ಜಿಯಲ್ಲಿ ನೋಟಿಸ್ ಜಾರಿಯಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತರಿಗೆ ತನಿಖಾ ವರದಿ ಸಲ್ಲಿಸುವಂತೆ ಏಕಸದಸ್ಯ ಪೀಠ ಆದೇಶಿಸಿದೆ. ಈ ಪ್ರಕರಣದ ವಿಚಾರಣೆಯು ಡಿಸೆಂಬರ್ 10ಕ್ಕೆ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರದಲಿದೆ. ಇದರಲ್ಲಿ ನಮಗೆ ರಕ್ಷಣ ನೀಡಬೇಕು” ಎಂದು ಮನವಿ ಮಾಡಿದರು.
“ರಾಜಕೀಯ ಕೆಸರೆರಚಾಟದಲ್ಲಿ 80 ವರ್ಷ ದೇವರಾಜು ಅವರನ್ನು ಸಿಲುಕಿಸಲಾಗಿದ್ದು, ನಮ್ಮ ವಾದ ಆಲಿಸದೇ ಏಕಸದಸ್ಯ ಪೀಠವು ದೇವರಾಜು ಅವರನ್ನು ಏಕಸದಸ್ಯ ಪೀಠವು ಕ್ರಿಮಿನಲ್ ಪ್ರಕರಣ ಎದುರಿಸಲು ಆದೇಶಿಸಿದೆ. ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ (ರಾಜ್ಯಪಾಲರ ಅನುಮತಿ ಎತ್ತಿಹಿಡಿದಿರುವುದು) ಗಂಭೀರ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇದು ದೇವರಾಜು ಹಕ್ಕಿಗೆ ಧಕ್ಕೆ ಮಾಡಿದೆ. ಈ ನೆಲೆಯಲ್ಲಿ ರಕ್ಷಣೆಗೆ ಒದಗಿಸಬೇಕು. ಇಲ್ಲವಾದಲ್ಲಿ ಅದನ್ನು ಆದೇಶದಲ್ಲಿ ದಾಖಲಿಸಬೇಕು. ಸೂಕ್ತ ವೇದಿಕೆಯಲ್ಲಿ ರಕ್ಷಣೆ ಪಡೆಯಲಾಗುವುದು” ಎಂದು ಕೋರಿದರು.
ಇದಕ್ಕೆ ಹಿರಿಯ ವಕೀಲರಾದ ಮಣೀಂದರ್ ಸಿಂಗ್ ಮತ್ತು ಕೆ ಜಿ ರಾಘವನ್ ಆಕ್ಷೇಪಿಸಿದರು. ಏಕಸದಸ್ಯ ಪೀಠದಲ್ಲಿ ನೋಟಿಸ್ ಮಾತ್ರವಾಗಿದೆ. ರಕ್ಷಣೆ ಕೋರುವ ಯಾವುದೇ ಬೆಳವಣಿಗೆಯಾಗಿಲ್ಲ. ಹೀಗಾಗಿ, ಮೇಲ್ಮನವಿದಾರರ ಮನವಿಯನ್ನು ಪುರಸ್ಕರಿಸಬಾರದು. ಮೇಲ್ಮನವಿದಾರರ ಪರ ಹಿರಿಯ ವಕೀಲರು ಮಧ್ಯಂತರ ಆದೇಶ ಪಡೆಯಲು ತಂತ್ರ ರೂಪಿಸಿದ್ದಾರೆ ಎಂದು ಆಕ್ಷೇಪಿಸಿದರು. ಇದಕ್ಕೆ ಸಹಮತಿಸಿದ ಪೀಠವು “ಏಕಸದಸ್ಯ ಪೀಠದ ಮುಂದಿರುವ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ” ಎಂದು ನಿರಾಕರಿಸಿತು.