ಹುಬ್ಬಳ್ಳಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಏನೂ ಮಾಡಿಲ್ಲವೆಂದಾದರೆ ಡಿಸಿ ವರ್ಗಾವಣೆ ಮಾಡಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆಗಿದೆ. ಮೇಲ್ನೋಟಕ್ಕೆ ಇದು ಸ್ಪಷ್ಟವಾಗಿದೆ. 2017 ರಲ್ಲಿ ಈ ನಿರ್ಣಯಗಳಾಗಿವೆ. ಸಿದ್ದರಾಮಯ್ಯ ಗಮನದಲ್ಲಿ ಇದ್ದೇ ಆಗಿರುವ ಬಹುದೊಡ್ಡ ಹಗರಣ ಎಂದು ಆರೋಪಿಸಿದ್ದಾರೆ.
ಈ ಹಗರಣದಲ್ಲಿ 4 ಸಾವಿರ ಕೋಟಿ ಅಕ್ರಮ ಎಸಗಿರುವ ಬಗ್ಗೆ ಆರೋಪಗಳಿವೆ. ಬಿಜೆಪಿ ಕಾಲದಲ್ಲಿ ಕೊಟ್ಟಿದ್ದು ಎನ್ನುತ್ತಾರೆ. ಈ ಎಲ್ಲ ಅವ್ಯವಹಾರ ಆಗಿದ್ದು 2013 ರಿಂದ 2018 ರವರೆಗೆ. ನೀವ ಏನೂ ಮಾಡಿಲ್ಲ ಅಂದ್ರೆ ಡಿಸಿಯನ್ನು ಯಾಕೆ ವರ್ಗಾವಣೆ ಮಾಡಿದ್ದೀರಿ? ಅವ್ಯವಹಾರ ನಡೆಯುತ್ತಿದೆ ಎಂದು ಡಿಸಿ ಪತ್ರ ಬರೆದಿದ್ದರು. ಕಳೆದ ಒಂದು ವರ್ಷದಲ್ಲಿ 15 ಕ್ಕೂ ಹೆಚ್ಚು ಪತ್ರ ಬರೆದಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಹಾಗೂ ಮಗ ಜಮೀನು ವಶಪಡಿಸಿಕೊಂಡಿದ್ದಾರೆ ಎಂದಿದ್ದಾರೆ ಎಂದು ಜೋಶಿ ಹೇಳಿದರು.
ಇದು ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ಮಾಡಿರುವ ಬಹುದೊಡ್ಡ ಹಗರಣ. ಇದರ ತನಿಖೆಯ ಹೊಣೆಯನ್ನು ಸಿಬಿಐಗೆ ಕೊಡಬೇಕು. ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದಾದರೆ ಸಿಬಿಐ ತನಿಖೆಗೆ ಕೊಡಲಿ ಎಂದು ಅವರು ಆಗ್ರಹಿಸಿದರು.
ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಎಂದರು. ಅದಕ್ಕೆ ಯಾವ ದಾಖಲೆಯೂ ಇಲ್ಲ. ಕೋರ್ಟ್ ಮಾನಹಾನಿ ಕೇಸ್ ಹಾಕಲಾಗಿತ್ತು. ಅದಕ್ಕೆ ವಾರೆಂಟ್ ತಗೆದುಕೊಂಡಿದ್ದಾರೆ. ಇದೀಗ ಎರಡು ಹಗರಣಗಳಲ್ಲಿ ಮುಖ್ಯಮಂತ್ರಿಯದ್ದೇ ಪಾತ್ರ ಇದೆ ಎಂದು ಜೋಶಿ ಟೀಕಿಸಿದರು.
ಕಡುಭ್ರಷ್ಟ ಸರ್ಕಾರ
ಒಂದು ಕಡೆ ವಾಲ್ಮೀಕಿ ಹಗರಣ, ಮತ್ತೊಂದು ಕಡೆ ಮುಡಾ ಹಗರಣ. ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಎಸ್ಐಟಿಯವರು ಕೆಲವರನ್ನು ಬಂಧಿಸಿದ್ದಾರೆ. ಅವರಿಗೆ ಅವಕಾಶ ಕೊಟ್ಟು ನೋಟಿಸ್ ಕೊಟ್ಟಿದ್ದಾರೆ. ನಾಗೇಂದ್ರ ಅವರಿಗೆ ಶುಕ್ರವಾರ ನೋಟಿಸ್ ಕೊಟ್ಟಿದ್ದಾರೆ. ಎಲ್ಲವನ್ನೂ ಮುಚ್ಚಿ ಹಾಕಲು ಷಡ್ಯಂತ್ರ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ಒಂದು ಕಡುಭ್ರಷ್ಟ ಸರ್ಕಾರ ಎಂದು ಜೋಶಿ ಕಿಡಿಕಾರಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಇಲ್ಲ. ಬೋಗಸ್ ಗ್ಯಾರಂಟಿ ಹೆಸರಲ್ಲಿ ಯಾವ ಕೆಲಸಗಳೂ ನಡೆಯುತ್ತಿಲ್ಲ. ದಿವಾಳಿ ಸರ್ಕಾರದಲ್ಲಿ ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಬಣವೆಗೆ ಬೆಂಕಿ ಹಚ್ಚಿ ಸಿಗರೇಟ್ ಹೇಗೆ ಹಚ್ಕೋಬೇಕು ಎಂಬುದನ್ನು ಇವರಿಂದ ನೋಡಿ ಕಲಿಯಬೇಕು. ದಲಿತರ ಹಣ ಗ್ಯಾರಂಟಿಗೆ ಉಪಯೋಗ ಮಾಡಿಕೊಂಡಿದ್ದಾರೆ ಎಂದು ಜೋಶಿ ವಾಗ್ದಾಳಿ ನಡೆಸಿದರು.
ಹಿಂದೂ ವಿರೋಧಿ ಸರ್ಕಾರ:
ಲವ್ ಜಿಹಾದ್ ಕುರಿತು ಶ್ರೀರಾಮಸೇನೆ ಹೆಲ್ಪಲೈನ್ ಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಈ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ಸರ್ಕಾರ ಫೇಸ್ಬುಕ್ ಬಂದ್ ಮಾಡಿರೋದು ತಪ್ಪು. ಈ ವಿಚಾರ ನನಗೆ ಗೊತ್ತಿಲ್ಲ. ಫೇಸ್ಬುಕ್ ಬಂದ್ ಮಾಡಿದ್ದರೆ ಆತ್ಯಂತ ಖಂಡನೀಯ. ಬಾಂಬ್ ಬೆದರಿಕೆ ಹಾಕೋದು ಸರಿ ಅಲ್ಲ. ಹಿಂಸೆ ಯಾವತ್ತೂ ಸರಿಯಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ಮಾಡಬೇಕು ಎಂದಿದ್ದಾರೆ.