ಮನೆ ರಾಜಕೀಯ ಮುಡಾ ಸೈಟ್​ ವಾಪಸ್​ ಕೊಟ್ಟಿರುವುದು ರಾಜಕೀಯ ಡ್ರಾಮಾ: ಬಿ.ವೈ.ವಿಜಯೇಂದ್ರ

ಮುಡಾ ಸೈಟ್​ ವಾಪಸ್​ ಕೊಟ್ಟಿರುವುದು ರಾಜಕೀಯ ಡ್ರಾಮಾ: ಬಿ.ವೈ.ವಿಜಯೇಂದ್ರ

0

ಬೆಂಗಳೂರು: ಮುಡಾ ಸೈಟ್​ ವಾಪಸ್​ ಕೊಟ್ಟಿರುವುದು ರಾಜಕೀಯ ಡ್ರಾಮಾ. ಸಿದ್ದರಾಮಯ್ಯನವರು ಇನ್ನು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ  ವಾಗ್ದಾಳಿ ನಡೆಸಿದ್ದಾರೆ.

Join Our Whatsapp Group

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾನೂನಿನ ಕುಣಿಕೆಯಿಂದ ಪಾರಾಗಲು, ಅನುಕಂಪ ಪಡೆಯಲು ಸಿದ್ದರಾಮಯ್ಯ ಸೈಟ್ ವಾಪಸ್ ಕೊಡುವ ನಿರ್ಧಾರ ಕೈಗೊಂಡಿದ್ದಾರೆ. ಸ್ವಪಕ್ಷದಲ್ಲೇ ತೊಡೆ ತಟ್ಟುವವರನ್ನು ಎದುರಿಸಬೇಕು ಅಂತಾ ಅಷ್ಟೇ ಈ ಲೆಕ್ಕಾಚಾರ. ಸಿದ್ದರಾಮಯ್ಯನವರು ಇನ್ನು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು. ರಾಜೀನಾಮೆ ನೀಡುವ ಮೊದಲು ಸಿಎಂ ರಾಜ್ಯಪಾಲರ ಕ್ಷಮೆ ಕೇಳಬೇಕು. ಡಿಜಿಪಿಯವರು ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ನಾವು ಅಹೋರಾತ್ರಿ ಧರಣಿ ಮಾಡಿದರೂ ಅಧಿವೇಶನ ಮೊಟಕುಗೊಳಿಸಿ ಸಿದ್ದರಾಮಯ್ಯ ಪಲಾಯನ ಮಾಡಿದರು. ಬಿಜೆಪಿ ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರಿಗೆ ಪಾದಯಾತ್ರೆ ಮಾಡಿತು. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದೆ ಎಂದು ಸದನದಲ್ಲೇ ಸಿಎಂ ಒಪ್ಪಿಕೊಂಡಿದ್ದಾರೆ. ನಿನ್ನೆ ರಾತ್ರಿ ಮಹತ್ತರ ಬೆಳವಣಿಗೆಯಲ್ಲಿ ಸಿಎಂ ಧರ್ಮಪತ್ನಿಯವರು ಸಿಎಂ ಗಮನಕ್ಕೆ ಬರದೇ, ಸಿಎಂ ಪುತ್ರ ಗಮನಕ್ಕೂ ಬರದೇ ಸಿಎಂ ಅಧಿಕೃತ ನಿವಾಸದಿಂದಲೇ ಪತ್ರ ಬರೆದಿದ್ದಾರೆ.

ಪಾರ್ವತಿ ಅವರು ಅವರಾಗಿಯೇ ಪತ್ರ ಬರೆದಿದ್ದಾರೋ ಅಥವಾ ಬಲವಂತವಾಗಿ ಬರೆದಿದ್ದಾರೋ ಗೊತ್ತಿಲ್ಲ. ನಾನು ಜಗ್ಗಲ್ಲ, ಬಗ್ಗಲ್ಲ ಅಂತಾ ಸಿದ್ದರಾಮಯ್ಯ ಆರ್ಭಟ ಮಾಡುತ್ತಿದ್ದರು. ನಾನ್ಯಾಕೆ ಸೈಟ್ ವಾಪಸ್ ಕೊಡಬೇಕು, ನನಗೆ 62 ಕೋಟಿ ಕೊಡುತ್ತಾರಾ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಸಾಮಾಜಿಕ ಕಾರ್ಯಕರ್ತರು ಕೊಟ್ಟ ದೂರು, ಅದರ ಆಧಾರದಲ್ಲಿ ರಾಜ್ಯಪಾಲರು ಕೊಟ್ಟ ಅನುಮತಿ, ಕೋರ್ಟ್ ಆದೇಶ ಎಲ್ಲವೂ ಆಗಿದೆ. ಸಿದ್ದರಾಮಯ್ಯ ಸೈಟ್ ವಾಪಸ್ ಕೊಡುವ ನಿರ್ಧಾರ ಕೈಗೊಂಡಿದ್ದಾರೆ ಎಂದರೆ ಕಾನೂನಿನ ಕುಣಿಕೆಯಿಂದ ಪಾರಾಗಬೇಕು, ರಾಜಕೀಯ ಅನುಕಂಪ ಪಡೆಯಬೇಕು, ಸ್ವಪಕ್ಷದಲ್ಲೇ ತಡೆ ತಟ್ಟುವವರನ್ನು ಎದುರಿಸಬೇಕು ಅಂತಾ ಅಷ್ಟೇ. ಸೈಟ್ ವಾಪಸ್ ಕೊಟ್ಟಿರೋದು ರಾಜಕೀಯ ಡ್ರಾಮಾ ಎಂದರು.

ಮುಡಾ ಪ್ರಕರಣದ ವಿಚಾರವಾಗಿ ನಾವು ಹೋರಾಟ ಮಾಡಿದ್ದೆವು. ಸಿಎಂ ನಮ್ಮ ಹೋರಾಟಕ್ಕೆ ಕಿಂಚಿತ್ತೂ ಬೆಲೆ ಕೊಡಲಿಲ್ಲ. ಹಿಂದೆ ಭ್ರಷ್ಟಾಚಾರ ಆರೋಪ ಬಂದಾಗ ಎಸಿಬಿ ರಚನೆ ಮಾಡಿದ್ದರು. ಲೋಕಾಯುಕ್ತ ಸಂಸ್ಥೆ ಮುಚ್ಚಿ ಹಾಕಿ ಎಸಿಬಿ ರಚನೆ ಮಾಡಿದ್ದರು. ಎಸಿಬಿ ರಚಿಸಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಮುಡಾ ಸೈಟ್​ ಹಂಚಿಕೆ ಕೇಸ್​ನಲ್ಲಿ ಎರಡು ವಿಚಾರ ಗಮನಿಸಬೇಕು. ಸಿಎಂ ಪತ್ನಿಗೆ 14 ನಿವೇಶನ ಹಂಚಿಕೆ ಮಾಡಿದ್ದು ಒಂದು ಕಡೆಯಾದರೆ. ಸಿಎಂ ಹಿಂಬಾಲಕರು, ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೂ ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.