ಬೆಂಗಳೂರು: ನಿಮ್ಮ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳಿಗೆ ಮುಡಾ ಟ್ರ್ಯಾಪ್, ಸಚಿವರು, ದಲಿತ ಸಮಾಜದ ಹಿರಿಯರಾದ ಪರಮೇಶ್ವರ್ ಅವರಿಗೆ ಚಿನ್ನದ ಟ್ರ್ಯಾಪ್, ಹಿರಿಯ ಸಚಿವರಾದ ರಾಜಣ್ಣ ಅವರಿಗೆ ಹನಿಟ್ರ್ಯಾಪ್… ಇದೆಂಥಾ ವಿಶ್ವಾಸಾರ್ಹತೆ? ಇನ್ನು ನಿಮ್ಮ ಹಿಟ್ ಲಿಸ್ಟ್‌ನಲ್ಲಿರುವ ಉಳಿಕೆ ಕಾಂಗ್ರೆಸ್ ನಾಯಕರನ್ನ ದೇವರೇ ರಕ್ಷಣೆ ಮಾಡಬೇಕು ಅಂತ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಕುಟುಕಿದ್ದಾರೆ.
“ಜೆಡಿಎಸ್‌ಗೇ ಭವಿಷ್ಯ ಇಲ್ಲ” ಎಂಬ ಡಿಕೆಶಿಯ ಹೇಳಿಕೆಯನ್ನು ಉಲ್ಲೇಖಿಸಿ ನಿಖಿಲ್ ಪ್ರತಿಸ್ಪಂದಿಸಿದ್ದು, “ಭವಿಷ್ಯ, ಅವಕಾಶ ಮತ್ತು ನಂಬಿಕೆ ಬಗ್ಗೆ ಮಾತನಾಡುವ ನೀವು 2023ರ ಚುನಾವಣೆ ಫಲಿತಾಂಶವನ್ನು ನೆನೆಸಿಕೊಳ್ಳಿ. ನಿಮ್ಮ ನಂಬಿಕೆಯ ಜಾಡಿನಲ್ಲಿ ನಡೆದವರಿಗೆ ನೀವು ನೀಡಿದ್ದು ಏನು?” ನಂಬಿಕೆ ಮತ್ತು ವಿಶ್ವಾಸರ್ಹತೆ ಬಗ್ಗೆ ನೀವು ಮಾತನಾಡಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದ ಹಾಗಿದೆ ಎಂದು ಕಿಡಿಕಾರಿದ್ದಾರೆ.
“ನಿಮ್ಮನ್ನ ನಂಬಿ ಜೆಡಿಎಸ್ ಬಿಟ್ಟು ಬಂದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನವೇ ಸಿಗಲಿಲ್ಲ. ಹಾಸನದ ಏಕೈಕ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡರನ್ನು ಸಹ ಮಂತ್ರಿಮಂಡಲದಿಂದ ಹೊರಗಿಟ್ಟುಬಿಟ್ಟಿರಿ. ಗುಬ್ಬಿಯ ಶಾಸಕರನ್ನು ಮಾತ್ರವಲ್ಲ, ಅವರ ಪತ್ನಿಯನ್ನು ಡೇರಿ ಅಧ್ಯಕ್ಷರನ್ನಾಗಿಯೂ ಮಾಡಲಿಲ್ಲ” ಎಂಬ ಆರೋಪಗಳು ನಿಖಿಲ್ ಅವರ ಟ್ವೀಟ್‌ನಲ್ಲಿ ಪ್ರಮುಖವಾಗಿವೆ.
ನಿಖಿಲ್ ತಮ್ಮ ಹೇಳಿಕೆಯಲ್ಲಿ ಡಿಕೆಶಿಯ ಪ್ರಸ್ತುತ ರಾಜಕೀಯ ನಡೆಗೆ ಗಂಭೀರ ಪ್ರಶ್ನೆ ಎತ್ತಿದ್ದಾರೆ: “ನಿಮ್ಮ ವಿರುದ್ಧ ಮಾತನಾಡಿದ ಮುಖ್ಯಮಂತ್ರಿಗೆ ಮುಡಾ ಟ್ರ್ಯಾಪ್, ಹಿರಿಯ ದಲಿತ ನಾಯಕ ಪರಮೇಶ್ವರ್ ಅವರಿಗೆ ಚಿನ್ನದ ಟ್ರ್ಯಾಪ್, ಹಿರಿಯ ಸಚಿವ ರಾಜಣ್ಣಗೆ ಹನಿಟ್ರ್ಯಾಪ್! ಈ ಟ್ರ್ಯಾಪ್ ರಾಜಕಾರಣದಿಂದ ಕಾಂಗ್ರೆಸ್ ನಾಯಕರ ಭವಿಷ್ಯವೇ ಅಪಾಯದಲ್ಲಿದೆ. ಈಗ ನಿಮ್ಮ ಹಿಟ್ ಲಿಸ್ಟ್‌ನಲ್ಲಿ ಇನ್ಯಾರು ಉಳಿದಿದ್ದಾರೆ?” ಎಂದು ನಿಖಿಲ್ ಪ್ರಶ್ನಿಸಿದ್ದಾರೆ.
ನಿಖಿಲ್, ತಮ್ಮ ಟ್ವೀಟ್‌ನಲ್ಲಿ “ಈ ರಾಷ್ಟ್ರ ಕಂಡ ಅಪರೂಪದ ನಾಯಕ ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ, ನಿಮ್ಮ ಭಾಷೆ ಪರೀಕ್ಷಿಸಿಕೊಳ್ಳಿ. ಮಾತು ಎಚ್ಚರದಿಂದ ಇರದಿದ್ದರೆ ಅದು ನಿಮ್ಮೊಳಗೆ ನುಗ್ಗುವ ಮುಳ್ಳಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಗುದ್ದಾಟ ಇರಲಿ, ಆದರೆ ಆರೋಗ್ಯಕರ ಚರ್ಚೆ ನಿರ್ವಹಿಸೋಣ. ಮಾತಿನಲ್ಲಿ ರಾಜಕೀಯ ಕಲೆಯಿರಲಿ, ದುಷ್ಪ್ರಯೋಗವಲ್ಲ. ಮುತ್ಸದ್ಧಿಯಾಗಿ ಬೆಳೆಯುವ ಕನಿಷ್ಠ ಪ್ರಯತ್ನವನ್ನಾದರೂ ಮಾಡಿ ಎಂದು ಕಿಡಿಕಾರಿದ್ದಾರೆ.














