ಮನೆ ಸುದ್ದಿ ಜಾಲ ಮೂಡಿಗೆರೆ: ಕಾಡಾನೆ ಬೈರ ಸೆರೆ- ನಿಟ್ಟುಸಿರು ಬಿಟ್ಟ ಜನತೆ

ಮೂಡಿಗೆರೆ: ಕಾಡಾನೆ ಬೈರ ಸೆರೆ- ನಿಟ್ಟುಸಿರು ಬಿಟ್ಟ ಜನತೆ

0

ಮೂಡಿಗೆರೆ(Mudigere): ತಾಲ್ಲೂಕಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ದಾಂದಲೆ ನಡೆಸುತ್ತಿದ್ದ ಕಾಡಾನೆ ‘ಬೈರ’ನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಹಿಂದೆ ಬೈರನ ಸೆರೆಗೆ ಸರ್ಕಾರ ಆದೇಶ ನೀಡಿದರೂ ಕಾರ್ಯಚರಣೆ ಯಶಸ್ವಿಯಾಗಿರಲಿಲ್ಲ. ಕುಂದೂರು ಭಾಗದಲ್ಲಿ ಕಾರ್ಯಚರಣೆ ಪ್ರಾರಂಭವಾದ ಎಂಟು ದಿನಗಳಲ್ಲಿ ಎರಡು ಕಾಡಾನೆಗಳನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದರಿಂದ ಬೈರನನ್ನು ಕೂಡ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು.

ಭಾನುವಾರ ದಿಢೀರ್ ಕಾರ್ಯಾಚರಣೆಯಲ್ಲಿ ಬೈರ ಸೆರೆಯಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳ ಜನರು ನಿಟ್ಟುಸಿರು ಬಿಟ್ಟರು. ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾನಿ ಮಾಡುತ್ತಿದ್ದ ಬೈರ ಎಂಬ ಕಾಡಾನೆಯನ್ನು ಭಾನುವಾರ ಸಂಜೆ ಸೆರೆ ಹಿಡಿದು ಸ್ಥಳಾಂತರಿಸಲಾಯಿತು.

ಭಾನುವಾರ ಬೆಳಿಗ್ಗೆ 11ರ ಸುಮಾರಿಗೆ ಬೈರ ಹೊಸಳ್ಳಿ ಗ್ರಾಮದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಫಿ ತೋಟದಲ್ಲಿದ್ದ ಬಾಳೆ ಗಿಡವನ್ನು ತಿನ್ನುತಿದ್ದಾಗ, ಸ್ಥಳೀಯರ ಕಣ್ಣಿಗೆ ಕಾಣಿಸಿಕೊಂಡಿತು. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಬೈರನನ್ನು ಸೆರೆ ಹಿಡಿಯಲು ಸಾಕಾನೆಗಳನ್ನು ದೊಡ್ಡಳ್ಳದ ಶಿಬಿರದಿಂದ ಊರುಬಗೆ ಗ್ರಾಮಕ್ಕೆ ಲಾರಿಗಳಲ್ಲಿ ಕರೆದೊಯ್ಯಲಾಯಿತು. ಸಾಕಾನೆಗಳೊಂದಿಗೆ ಬಂದ ವೈದ್ಯಾಧಿಕಾರಿಗಳು ಹೊಸಳ್ಳಿ ಗ್ರಾಮದ ಬಳಿ ಬೈರನಿಗೆ ಅರೆವಳಿಕೆ ಚುಚ್ಚುಮದ್ದು ನೀಡಿದರು. ಚುಚ್ಚುಮದ್ದು ನೀಡಿದ ಜಾಗದಿಂದ ಸುಮಾರು 500 ಮೀಟರ್‌ ದೂರ ಹೋಗಿ ನೆಲಕ್ಕೆ ಬಿದ್ದ ಕಾಡಾನೆ ಬೈರನನ್ನು ಸಾಕಾನೆಗಳು ಸುತ್ತುವರೆದು ಸೆರೆ ಹಿಡಿದವು.ತುಂತುರು ಮಳೆಯಲ್ಲಿಯೇ ಅರಣ್ಯ ಇಲಾಖೆ ಸಿಬ್ಬಂದಿ, ಮಾವುತರು, ಪರಿಣಿತರು, ವೈದ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೈರನನ್ನು ಯಶಸ್ವಿಯಾಗಿ ಸೆರೆ ಹಿಡಿದರು.