ಚೆನ್ನೈ (ತಮಿಳುನಾಡು): ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿದ್ದ ನಟ ಡೇನಿಯಲ್ ಬಾಲಾಜಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ನಟನಿಗೆ 48 ವರ್ಷ ವಯಸ್ಸಾಗಿತ್ತು. ತೀವ್ರ ಹೃದಯಾಘಾತ ಹಿನ್ನೆಲೆ ಮಾರ್ಚ್ 29ರ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ವೆಟ್ಟೈಯಾಡು ವಿಲಯಾಡು ಚಿತ್ರದಲ್ಲಿನ ಅಮುಧನ್ ಮತ್ತು ವದ ಚೆನ್ನೈನಲ್ಲಿನ ತಂಬಿಯಂತಹ ಪಾತ್ರಗಳ ಮೂಲಕ ಗಮನ ಸೆಳೆದವರು. ಗಮನಾರ್ಹ ಚಿತ್ರಣಕ್ಕಾಗಿ ಗುರುತಿಸಲ್ಪಟ್ಟ ಬಾಲಾಜಿ ತಮ್ಮ ಅತ್ಯುತ್ತಮ ನಟನೆಯಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಎದೆನೋವಿನಿಂದ ಬಳಲುತ್ತಿದ್ದ ಡೇನಿಯಲ್ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದುರಾದೃಷ್ಟವಶಾತ್ 48ರ ಹರೆಯದಲ್ಲೇ ಅವರು ಇಹಲೋಕ ತ್ಯಜಿಸಿದ್ದಾರೆ.
ಇಂದು (ಮಾರ್ಚ್ 30, ಶನಿವಾರ) ಡೇನಿಯಲ್ ಬಾಲಾಜಿ ಅವರ ಅಂತಿಮದರ್ಶನಕ್ಕೆ ಪುರಸೈವಾಲ್ಕಮ್‌ನಲ್ಲಿರುವ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ವರದಿಯಾಗಿದೆ. ನಟನ ಹಠಾತ್ ನಿಧನ ತಮಿಳು ಚಿತ್ರರಂಗ ಮಾತ್ರವಲ್ಲದೇ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ತೀವ್ರ ನೋವನ್ನುಂಟು ಮಾಡಿದೆ. ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಸಂತಾಪ ಸೂಚಿಸಲಾಗುತ್ತಿದೆ.
ಡೇನಿಯಲ್ ಬಾಲಾಜಿ ಕಿರುತೆರೆ ಮೂಲಕ ತಮ್ಮ ನಟನಾ ಪ್ರಯಾಣವನ್ನು ಪ್ರಾರಂಭಿಸಿದರು. ಜನಪ್ರಿಯ ಚಿಥಿ ಶೋನಲ್ಲಿ ಒಂದು ಪಾತ್ರ ನಿರ್ವಹಿಸಿದ್ದರು. ನಂತರ ಬೆಳ್ಳಿತೆರೆ ಪ್ರವೇಶಿಸಿದರು. 2002ರ ತಮಿಳು ರೊಮ್ಯಾಂಟಿಕ್ ಡ್ರಾಮಾ ‘ಏಪ್ರಿಲ್ ಮಾಧತಿಲ್’ ನಟನ ಚೊಚ್ಚಲ ಚಿತ್ರ. ಪೋಷಕ ಪಾತ್ರಗಳ ಜೊತೆಗೆ ಲೀಡ್ ರೋಲ್ ಮೂಲಕವೂ ಗುರುತಿಸಿಕೊಂಡಿದ್ದಾರೆ.