ಮುಂಬೈ(Mumabi): ಗಾಂಧಿನಗರದಿಂದ ಮುಂಬೈಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮುಂಬೈನ ಅತುಲ್ ಬಳಿ ಗೂಳಿಯೊಂದಕ್ಕೆ ಡಿಕ್ಕಿಯಾಗಿ ಜಖಂಗೊಂಡಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಇದರಿಂದ ರೈಲಿನ ಮುಂಭಾಗಕ್ಕೆ ಹಾನಿಯಾಗಿದ್ದು, 15 ನಿಮಿಷ ತಡವಾಗಿ ಮುಂಬೈ ಸೆಂಟ್ರಲ್ ನಿಲ್ದಾಣವನ್ನು ತಲುಪಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಪಾಯವಾಗಿಲ್ಲ. ಗೂಳಿ ಸತ್ತಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ತಿಳಿಸಿದ್ದಾರೆ.
ವಿಶೇಷವೆಂದರೆ ಇದೇ ರೈಲು ಒಂದೇ ತಿಂಗಳಲ್ಲಿ ಮೂರು ಬಾರಿ ಅಪಘಾತವಾಗಿದೆ. ಮೂರು ಬಾರಿಯೂ ಜಾನುವಾರುಗಳಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿವೆ.
ಅ.6 ರಂದು ಎಮ್ಮೆಗಳ ಹಿಂಡಿಗೆ ಗುದ್ದಿ ಹಾನಿಗೀಡಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಅ. 7 ರಂದು ಹಸುವಿಗೆ ಗುದ್ದಿತ್ತು. ಹೀಗಾಗಿ ರೈಲಿನ ಮುಂಭಾಗ ಅಲ್ಪ ಪ್ರಮಾಣದಲ್ಲಿ ಜಖಂಗೊಂಡಿತ್ತು. ರೈಲಿನ ಮುಂಭಾಗವನ್ನು ಶುಕ್ರವಾರವಷ್ಟೇ ದುರಸ್ತಿ ಮಾಡಿ, ರೈಲಿಗೆ ಮರಳಿ ಚಾಲನೆ ನೀಡಲಾಗಿತ್ತು. ದುರಸ್ತಿಯಾದ ಕೆಲ ದಿನಗಳ ಬಳಿಕ ಈ ಅತ್ಯಾಧುನಿಕ ರೈಲಿಗೆ ಮತ್ತೊಂದು ಅಪಘಾತವಾಗಿದೆ.














