ಮನೆ ಕಾನೂನು ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್‌ ಪ್ರಕರಣ: ಇನ್‌ ಸ್ಪೆಕ್ಟರ್‌ ಐಯ್ಯಣ್ಣ ರೆಡ್ಡಿಗೆ 14 ದಿನ ನ್ಯಾಯಾಂಗ...

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್‌ ಪ್ರಕರಣ: ಇನ್‌ ಸ್ಪೆಕ್ಟರ್‌ ಐಯ್ಯಣ್ಣ ರೆಡ್ಡಿಗೆ 14 ದಿನ ನ್ಯಾಯಾಂಗ ಬಂಧನ

0

ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ದದ ಅತ್ಯಾಚಾರ ಮತ್ತು ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ವಿಭಾಗದ ಹೆಬ್ಬಗೋಡೆ ಠಾಣೆಯ ಇನ್‌ಸ್ಪೆಕ್ಟರ್‌ ಐಯ್ಯಣ್ಣ ರೆಡ್ಡಿಯನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಶುಕ್ರವಾರ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ.

Join Our Whatsapp Group

ಕರ್ತವ್ಯದಲ್ಲಿದ್ದ ಐಯ್ಯಣ್ಣ ರೆಡ್ಡಿ ಅವರನ್ನು ಗುರುವಾರ ಬಂಧಿಸಿದ್ದ ಪೊಲೀಸರು ಇಂದು ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರ ಮುಂದೆ ಹಾಜರುಪಡಿಸಿದರು. ಘಟನೆಯ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ನ್ಯಾಯಾಂಗ ಬಂಧನಕ್ಕೆ ನೀಡಿದರು.

ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ ಐಯ್ಯಣ್ಣ ರೆಡ್ಡಿ ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಕರ್ತವ್ಯದ ಸಂದರ್ಭದಲ್ಲಿಯೇ ಅವರನ್ನು ಗುರುವಾರ ಬಂಧಿಸಿದ್ದರು.

ಮುನಿರತ್ನ ಶಾಸಕ ಮತ್ತು ಸಚಿವರಾಗಿದ್ದಾಗ ಐಯ್ಯಣ್ಣ ರೆಡ್ಡಿ ರಾಜರಾಜೇಶ್ವರಿ ನಗರದ ವ್ಯಾಪ್ತಿಯ ರಾಜಗೋಪಾಲನಗರ, ಯಶವಂತಪುರ, ಆರ್‌ ಆರ್‌ ನಗರ, ಪೀಣ್ಯ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈಚೆಗೆ ಕಬ್ಬನ್‌ ಪಾರ್ಕ್‌ ಠಾಣೆಗೆ ಬಳಿಕ ಹೆಬ್ಬಗೋಡಿ ಠಾಣೆಗೆ ವರ್ಗಾವಣೆಯಾಗಿದ್ದರು.

ಮುನಿರತ್ನ ಅವರ ದಂಧೆಗಳ ಬಗ್ಗೆ ಮಾಹಿತಿ ಇದ್ದರೂ ಐಯ್ಯಣ್ಣ ರೆಡ್ಡಿ ಕ್ರಮಕೈಗೊಂಡಿರಲಿಲ್ಲ. ಮುನಿರತ್ನ ವಿರುದ್ಧ ಮಾತನಾಡಿದರೆ ಅವರನ್ನು ಠಾಣೆಗೆ ಕರೆಯಿಸಿ ಬೆದರಿಕೆ ಹಾಕುವುದು, ಹನಿಟ್ರ್ಯಾಪ್‌ ತಂಡ ಗುರಿ ಇಡುತ್ತಿದ್ದ ವ್ಯಕ್ತಿಯ ಮಾಹಿತಿಯನ್ನು ರೆಡ್ಡಿ ತಮ್ಮ ಅಧಿಕಾರ ಬಳಸಿ ಸಂಗ್ರಹಿಸಿ ಅವರಿಗೆ ನೆರವಾಗುತ್ತಿದ್ದರು ಎಂದು ಆರೋಪಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆ ಹಾಗೂ ಮಾಜಿ ಕಾರ್ಪೊರೇಟರ್‌ ವೇಲು ನಾಯ್ಕರ್‌ ಅವರ ಹೇಳಿಕೆ ಆಧರಿಸಿ ವಿಶೇಷ ತನಿಖಾ ದಳವು ಐಯ್ಯಣ್ಣ ರೆಡ್ಡಿ ಬಂಧಿಸಿದೆ ಎನ್ನಲಾಗಿದೆ.

ಮುನಿರತ್ನ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ಲಂಚಕ್ಕೆ ಬೇಡಿಕೆ ಇರಿಸಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರವು ಎಸ್‌ಐಟಿ ತನಿಖೆಗೆ ವಹಿಸಿದೆ. ಎಲ್ಲಾ ಪ್ರಕರಗಳಲ್ಲೂ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಪಡೆದಿರುವ ಮುನಿರತ್ನ ಹೊರಗಿದ್ದಾರೆ.