ಮನೆ ಕಾನೂನು ಕೊಲೆ ಪ್ರಕರಣ: ಆರೋಪಿ ದೋಷಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ತಿರಸ್ಕರಿಸಿ ಜೀವಾವಧಿ ಶಿಕ್ಷೆ ನೀಡಿದ ಹೈಕೋರ್ಟ್

ಕೊಲೆ ಪ್ರಕರಣ: ಆರೋಪಿ ದೋಷಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ತಿರಸ್ಕರಿಸಿ ಜೀವಾವಧಿ ಶಿಕ್ಷೆ ನೀಡಿದ ಹೈಕೋರ್ಟ್

0

ಪತ್ನಿ ತವರು ಮನೆಯಿಂದ ವಾಪಸ್‌ ಆಗದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಆಕೆಯ ಸಹೋದರಿಯ ಆರು ವರ್ಷದ ಮಗನನ್ನು ಕೊಲೆಗೈದ ಮೈಸೂರಿನ ಎಚ್‌ ಡಿ ಕೋಟೆ ತಾಲ್ಲೂಕಿನ ಕರಿಗಾಲ ಗ್ರಾಮದ ನಿವಾಸಿ ನಾರಾಯಣ ಎಂಬಾತನಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Join Our Whatsapp Group

ಆರೋಪಿ ನಾರಾಯಣನನ್ನು ಖುಲಾಸೆಗೊಳಿಸಿದ್ದ ಮೈಸೂರಿನ ಸತ್ರ ನ್ಯಾಯಾಲಯದ ತೀರ್ಪನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್‌ ಕುಮಾರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ವಿಭಾಗೀಯ ಪೀಠ ರದ್ದುಪಡಿಸಿದೆ.

ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಎಚ್‌ ಡಿ ಕೋಟೆ ಠಾಣಾ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಪುರಸ್ಕರಿಸಿದ ವಿಭಾಗೀಯ ಪೀಠವು ನಾರಾಯಣನನ್ನು ದೋಷಿಯಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಿದೆ.

ಮೇಲ್ಮನವಿ ವಿಚಾರಣೆ ವೇಳೆ ಪೊಲೀಸರ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ರಶ್ಮಿ ಜಾಧವ್‌ ಅವರು, ಸುಶೀಲ ಮತ್ತು ಅವರ ತಂದೆಗೆ ಮದನ್‌ ಅನ್ನು ನಾರಾಯಣ ಕರೆದುಕೊಂಡು ಹೋಗಿರುವುದು ಗೊತ್ತಿತ್ತು. ಮದನ್‌ನನ್ನು ಕೊಲೆ ಮಾಡಿ ತಪ್ಪಿಕೊಳ್ಳುತ್ತಿದ್ದ ನಾರಾಯಣನ್ನು ಗ್ರಾಮಸ್ಥರು ನೋಡಿದ್ದರು. ತಪ್ಪಿಪ್ಪೊಗೆ ಹೇಳಿಕೆಯಲ್ಲೂ ಪತ್ನಿ ಸುಶೀಲ ಮೇಲಿನ ಸೇಡು ತೀರಿಸಿಕೊಳ್ಳಲು ಮದನ್‌ನನ್ನು ಕೊಲೆ ಮಾಡಿದ್ದಾಗಿ ನಾರಾಯಣ ಹೇಳಿದ್ದ. ಮದನ್‌ ಮೃತದೇಹ ನಾರಾಯಣನ ಮನೆ ಹಿತ್ತಲಲ್ಲಿ ಸಿಕ್ಕಿದೆ. ಹೀಗಿದ್ದರೂ ನಾರಾಯಣನ್ನು ದೋಷಮುಕ್ತಗೊಳಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ದೋಷಪೂರಿತವಾಗಿದೆ. ಆದ್ದರಿಂದ, ನಾರಾಯಣನನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು ಎಂದು ಕೋರಿದ್ದರು.

ಪ್ರಕರಣದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಹೈಕೋರ್ಟ್‌, ನಾರಾಯಣ ಮದನ್‌ನನ್ನು ಕೊಲೆ ಮಾಡಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದ ವಿವರ: ಕರಿಗಾಲ ಗ್ರಾಮದ ನಿವಾಸಿ ಸಿದ್ದೇಗೌಡ ಅವರ ಪುತ್ರಿ ಸುಶೀಲಾಳನ್ನು ನಾರಾಯಣ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಟ್ರ್ಯಾಕ್ಟರ್‌ ಚಾಲನಾಗಿದ್ದ ನಾರಾಯಣ ಮದ್ಯ ವ್ಯಸನಿಯಾಗಿದ್ದ. ಆತನ ಪತ್ನಿಗೆ ಅದೇ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಉದ್ಯೋಗ ಬಿಡುವಂತೆ ಪತ್ನಿಗೆ ಒತ್ತಾಯಿಸುತ್ತಿದ್ದ ಹಾಗೂ ಆಕೆಯ ಶೀಲ ಶಂಕಿಸುತ್ತಿದ್ದ. ಇದೇ ವಿಚಾರವಾಗಿ ಪತ್ನಿಯೊಂದಿಗೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತ ಸುಶೀಲ ಅದೇ ಗ್ರಾಮದಲ್ಲಿದ್ದ ತಂದೆ ಮನೆಗೆ ತೆರಳಿ ನೆಲೆಸಿದ್ದರು.

ನಾರಾಯಣ ಹಲವು ಬಾರಿ ಮನವಿ ಮಾಡಿದ್ದರೂ ಸುಶೀಲ ಗಂಡನ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಸೇಡು ತೀರಿಸಿಕೊಳ್ಳಲು ನಾರಾಯಣ, 2014ರಲ್ಲಿ ಸುಶೀಲ ಅವರ ತಂದೆಯ ಮನೆಯಲ್ಲಿದ್ದ ಆಕೆಯ ಅಕ್ಕನ ಪುತ್ರ ಮದನ್‌ಗೆ ಬಿಸ್ಕೆಟ್‌ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಈ ಕುರಿತು ಸುಶೀಲ ತಂದೆ ಎಚ್ ಡಿ ಕೋಟೆ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಕೊಲೆ ಅಪರಾಧದಡಿ ಆರೋಪ ಪಟ್ಟಿ ಸಲ್ಲಿಸಿದ್ದರು.

ನಾರಾಯಣನನ್ನು ಖುಲಾಸೆಗೊಳಿಸಿ ಮೈಸೂರಿನ 3ನೇ ಹೆಚ್ಚುವರಿ ಸತ್ರ ನ್ಯಾಯಾಲಯ 2016ರ ಆಗಸ್ಟ್‌ 28ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಎಚ್‌ ಡಿ ಕೋಟೆ ಠಾಣಾ ಪೊಲೀಸರು ಹೈಕೋರ್ಟ್‌ ಮೆಟ್ಟಿಲೇರಿದ್ದರು.