ಬಾಗಲಕೋಟೆ : ಪ್ರಭುಲಿಂಗ ದೇವರಿಗೆ 16 ಲಕ್ಷ ರೂ. ಮೌಲ್ಯದ ಬೆಳ್ಳಿ ಬಾಗಿಲು ಮಾಡಿಸಿ ಹೆಸರು ಗಳಿಸಿದ್ದ ವೃದ್ಧೆಯನ್ನು ಆಕೆಯ ಅಣ್ಣನ ಮಕ್ಕಳೇ ಹತ್ಯೆ ಮಾಡಿದ ಘಟನೆ ರಬಕವಿ ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವೃದ್ಧೆಯನ್ನು ಚಂದ್ರವ್ವ ನಿಲಜಗಿ (80) ಎಂದು ಗುರುತಿಸಲಾಗಿದೆ. ಆರೋಪಿಗಳು ತಮ್ಮ ಅತ್ತೆಯನ್ನು ಜಗದಾಳ ಬಳಿಯ ಘಟಪ್ರಭಾ ಕಾಲುವೆಗೆ ತಳ್ಳಿದ್ದರು. ಬಳಿಕ ಜನರು ಬರುತ್ತಿದ್ದಂತೆ ಕಾಪಾಡುವ ನಾಟಕ ಆಡಿದ್ದರು.
ಶವವನ್ನು ತೆಗೆದು ಅವಸರದಲ್ಲಿ ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರು ವ್ಯವಸ್ಥೆ ಮಾಡಿದ್ದರು. ಇದರಿಂದ ಸ್ಥಳೀಯರಿಗೆ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬನಹಟ್ಟಿ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ವೃದ್ಧೆಯ ಅಣ್ಣನ ಮಕ್ಕಳು ಹಾಗೂ ಆಕೆಯ ಮಧ್ಯೆ 11 ಎಕರೆ ಆಸ್ತಿ ವಿವಾದವಿತ್ತು ಎನ್ನಲಾಗುತ್ತಿದೆ. ಈ ಸಂಬಂಧ ಪೊಲೀಸರು 6 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.














