ಬೆಂಗಳೂರು(Bengaluru): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೇ ತನ್ನ ಪತಿಯನ್ನು ಕಬ್ಬಿಣದ ರಾಡ್ ನಿಂದ ಹತ್ಯೆ(Murder) ಮಾಡಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ರಿಯಲ್ ಎಸ್ಟೇಟ್ ಎಜೆಂಟ್ ಜೆಎಂ ಉಮೇಶ್(52) ಎಂದು ಗುರುತಿಸಲಾಗಿದೆ. ಕೊಲೆ ಆರೋಪದ ಮೇರೆಗೆ ಆತನ ಪತ್ನಿ ವರಲಕ್ಷ್ಮಿ(48)ಯನ್ನು ಪೊಲೀಸರು ಬಂಧಿಸಿದ್ದಾರೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಆಂಧ್ರಹಳ್ಳಿ ಮುಖ್ಯರಸ್ಥೆಯ ಸಾಯಿ ಬಾಬಾ ನಗರದಲ್ಲಿ ವಾಸವಾಗಿದ್ದರು.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರಿನ ಜಿನ್ನಾಗರ ಗ್ರಾಮದ ಉಮೇಶ್ ಅವರು ಸುಮಾರು 28 ವರ್ಷಗಳ ಹಿಂದೆ ವರಲಕ್ಷ್ಮಿ ಅವರನ್ನು ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಕ್ಷುಲಕ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದರು. ಆಕೆಯ ಕುಟುಂಬದವರು ಆರ್ಥಿಕವಾಗಿ ಸಹಾಯ ಮಾಡದ ಕಾರಣ ಬೇಸತ್ತು ಆಗಾಗ್ಗೆ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದರು.
ಭಾನುವಾರ ರಾತ್ರಿ ದಂಪತಿ ನಡುವೆ ಜಗಳವಾಗಿತ್ತು. ಸೋಮವಾರ ಬೆಳಗ್ಗೆ ಎದ್ದಾಗ ಉಮೇಶ್ ಮತ್ತೆ ಆಕೆಯೊಂದಿಗೆ ಜಗಳವಾಡಿ ಒದ್ದಿದ್ದಾನೆ ಎನ್ನಲಾಗಿದೆ ಮತ್ತೆ ನಿದ್ದೆಗೆ ಜಾರಿದ ಬಳಿಕ ವರಲಕ್ಷ್ಮಿ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದಿದ್ದಾರೆ. ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಳಗ್ಗೆ 7 ಗಂಟೆ ಸುಮಾರಿಗೆ ಎದ್ದ ಹೆಣ್ಣುಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.















