ಮನೆ ರಾಷ್ಟ್ರೀಯ ವೈದ್ಯ ವಿದ್ಯಾರ್ಥಿನಿ ಕೊಲೆ: ಸಿಬಿಐ ತನಿಖೆ ಆರಂಭ- ಆರೋಗ್ಯ ಸೇವೆಯಲ್ಲಿ ವ್ಯತ್ಯಯ

ವೈದ್ಯ ವಿದ್ಯಾರ್ಥಿನಿ ಕೊಲೆ: ಸಿಬಿಐ ತನಿಖೆ ಆರಂಭ- ಆರೋಗ್ಯ ಸೇವೆಯಲ್ಲಿ ವ್ಯತ್ಯಯ

0

ಕೋಲ್ಕತ್ತ: ಇಲ್ಲಿನ ಸರ್ಕಾರಿ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಕೈಗೆತ್ತಿಕೊಂಡಿದೆ. ಏತನ್ಮಧ್ಯೆ, ಕೃತ್ಯವನ್ನು ಖಂಡಿಸಿ ರಾಜ್ಯದಾದ್ಯಂತ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದು, ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಎಲ್ಲ ಸರ್ಕಾರಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದ (ಒಪಿಡಿ) ಟಿಕೆಟ್‌ ಕೌಂಟರ್‌ಗಳಲ್ಲಿ ಉದ್ದನೆಯ ಸಾಲುಗಳು ಕಾಣುತ್ತಿವೆ.

ನಮ್ಮಿಂದ ಹೊಸ ಬೇಡಿಕೆ ಏನೂ ಇಲ್ಲ. ಒಂದು ವರ್ಗದವರಿಗೆ ರಕ್ಷಣೆ ನೀಡುವ ಪ್ರಯತ್ನಗಳು ನಡೆಯುತ್ತಿರುವುದು ಕಂಡು ಬಂದಿವೆ. ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ನಮ್ಮ ಸಹೋದರಿಯ ಅತ್ಯಾಚಾರ ಹಾಗೂ ಕೊಲೆ ನಡೆದಿರುವ ಮಹಡಿಯಲ್ಲಿ ಕಾಮಗಾರಿ ಆರಂಭಿಸುವ ಮೂಲಕ ಕೆಲವರು ಸಾಕ್ಷ್ಯ ನಾಶ ಮಾಡಲು ಯತ್ನಿಸುತ್ತಿದ್ದಾರೆ. ನಮ್ಮ ಹೋರಾಟವನ್ನು ಕೈಬಿಡಲು ಯಾವ ಕಾರಣವೂ ಇಲ್ಲ ಎಂದು ಪ್ರತಿಭಟನಾನಿರತ ವೈದ್ಯರು ಹೇಳಿದ್ದಾರೆ.

 ತುರ್ತು ಸೇವೆಗಳನ್ನು ನೀಡಲಾಗುತ್ತಿದೆ. ಅದರೆ, ನಾವು ಹೋರಾಟ ನಡೆಸದಿದ್ದರೆ, ಮೃತ ವಿದ್ಯಾರ್ಥಿನಿಗೆ ನ್ಯಾಯ ಸಿಗುವುದಿಲ್ಲ. ಕೆಲವು ರೋಗಿಗಳಿಗೆ ಉಂಟಾಗಿರುವ ತೊಂದರೆಗೆ ಕ್ಷಮೆ ಕೇಳುತ್ತೇವೆ ಎಂದೂ ಅವರು ಹೇಳಿದ್ದಾರೆ.

ರಾಜ್ಯದಾದ್ಯಂತ ಇರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗದಲ್ಲಿ ಸೇವೆ ನಿಲ್ಲಿಸಲು ಪಶ್ಚಿಮ ಬಂಗಾಳ ವೈದ್ಯರ ಜಂಟಿ ವೇದಿಕೆ ಕರೆ ನೀಡಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕಿರಿಯ ಹಾಗೂ ಹಿರಿಯ ವೈದ್ಯರು, ತರಬೇತಿನಿರತರು ಮತ್ತು ಇತರ ಸಿಬ್ಬಂದಿ ತೋಳಿಗೆ ಕಪ್ಪು ಪಟ್ಟಿ ಧರಿಸಿ, ಸಂತ್ರಸ್ತ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.

ಕೋಲ್ಕತ್ತಕ್ಕೆ ಬಂದ ಸಿಬಿಐ ತಂಡ ಈ ಪ್ರಕರಣದ ತನಿಖೆಯನ್ನು ಕಲ್ಕತ್ತ ಹೈಕೋರ್ಟ್‌ ಮಂಗಳವಾರ ಸಿಬಿಐಗೆ ಮಂಗಳವಾರ ವರ್ಗಾಯಿಸಿದೆ. ಅದರಂತೆ, ಕಾರ್ಯಪ್ರವೃತ್ತರಾಗಿರುವ ಸಿಬಿಐ ತಂಡ ಇಂದು (ಬುಧವಾರ) ಕೋಲ್ಕತ್ತಕ್ಕೆ ಬಂದಿದೆ. ವೈದ್ಯಕೀಯ ಹಾಗೂ ವಿಧಿವಿಜ್ಞಾನ ತಜ್ಞರೂ ತಂಡದಲ್ಲಿದ್ದಾರೆ.

ಸಿಬಿಐ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.