ಮನೆ ಕಾನೂನು ಆರ್’ಟಿಐ ಕಾರ್ಯಕರ್ತನ ಹತ್ಯೆ: ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್

ಆರ್’ಟಿಐ ಕಾರ್ಯಕರ್ತನ ಹತ್ಯೆ: ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್

0


ಆರ್’ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದಿರುವ ಹೈಕೋರ್ಟ್ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದೆ.


ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದ ಆದೇಶ ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಟಿ.ಜಿ ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸುವ ಸೂಕ್ತ, ಸಮಗ್ರ, ಪೂರಕ ಸಾಕ್ಷ್ಯಗಳನ್ನು ಹಾಗೂ ದಾಖಲೆಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಆರ್ ಟಿಐ ಕಾರ್ಯಕರ್ತ ಹಾಗೂ ಪತ್ರಕರ್ತ ಲಿಂಗರಾಜು ಆಜಾದ್ ನಗರದ ಬಿಬಿಎಂಪಿ ಸದಸ್ಯೆ ಗೌರಮ್ಮ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರು ಗೌರಮ್ಮ ಮನೆ ಮೇಲೆ ದಾಳಿ ನಡೆಸಿದ್ದರು.ಈ ಬೆಳವಣಿಗೆಯ ಕೆಲ ದಿನಗಳ ಬಳಿಕ 2012ರ ನವೆಂಬರ್ 20ರಂದು ದುಷ್ಕರ್ಮಿಗಳು ಲಿಂಗರಾಜು ಅವರನ್ನು ಮೈಸೂರು ರಸ್ತೆಯ ಬಿಎಂಕೆ ಬಡಾವಣೆಯ ಅವರ ನಿವಾಸದ ಎದುರೇ ಮಚ್ಚು ಮತ್ತು ಕತ್ತಿಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್ ತನಿಖೆಗೆ ವಿಶೇಷ ತಂಡ ರಚನೆ ಮಾಡಿತ್ತು. ವಿಶೇಷ ತನಿಖಾ ತಂಡ ಬಿಬಿಎಂಪಿ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು, ರಂಗಸ್ವಾಮಿ, ಶಂಕರ, ರಾಘವೇಂದ್ರ, ಉಮಾಶಂಕರ್, ವೇಲು, ಜಹೀರ್, ಸುರೇಶ್, ಲೋಕನಾಥ್ ಸೇರಿದಂತೆ ಹತ್ತು ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಸಿಟಿ ಸಿವಿಲ್ & ಸೆಷನ್ಸ್ ಕೋರ್ಟ್ ಎಲ್ಲ ಹತ್ತು ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 2020 ರ ಅಕ್ಟೋಬರ್ 28ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.