ಜಗಳೂರು: ಆರ್’ಟಿಐ ಕಾರ್ಯಕರ್ತ, ತಾಲ್ಲೂಕಿನ ಗೌರಿಪುರ ಗ್ರಾಮದ ಜಿ.ಪಿ. ರಾಮಕೃಷ್ಣ ಎಂಬುವವರ ಹತ್ಯೆಗೆ ಸಂಬಂಧಿಸಿದಂತೆ ಪಿಡಿಒ ಎ.ಟಿ. ನಾಗರಾಜ್ ಸೇರಿ 11 ಮಂದಿ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯೆಗೀಡಾದ ರಾಮಕೃಷ್ಣ ಅವರ ತಂದೆ ಪಿ. ಪ್ರಕಾಶ ಅವರು 11 ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರಿನಲ್ಲೇನಿದೆ ? :
ತಾಲ್ಲೂಕಿನ ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯಡಿ ನಡೆದಿದ್ದ, ಭಾರಿ ಅವ್ಯವಹಾರವನ್ನು ಮಗ ರಾಮಕೃಷ್ಣ ಬಯಲಿಗೆಳೆದಿದ್ದ. ಪರಿಣಾಮವಾಗಿ ಗ್ರಾಮ ಪಂಚಾಯಿತಿಯ ಕೆಲವು ಪಿಡಿಒ ಮತ್ತು ಕಾರ್ಯದರ್ಶಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಇದರ ಸಿಟ್ಟಿಗೆ ಪೂರ್ವನಿಯೋಜಿಯತವಾಗಿ ಶನಿವಾರ ಹೊಸಕೆರೆ ಸಮೀಪದ ಡಾಬಾದಲ್ಲಿ ಊಟದ ನೆಪದಲ್ಲಿ ಮಗನಿಗೆ ಮದ್ಯವನ್ನು ಕುಡಿಸಿ, ಕಡಪಾ ಕಲ್ಲಿನಿಂದ ತಲೆ ಹಿಂಭಾಗಕ್ಕೆ ಸಾಯುವ ತನಕ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ರಾಮಕೃಷ್ಣ ಅವರ ತಂದೆ ಪ್ರಕಾಶ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳಾದ ಪ್ರಶಾಂತ್ ಮತ್ತು ದರ್ಶನ್ ಎಂಬುವವರನ್ನು ಪೊಲೀಸರು ಭಾನುವಾರ ಬಂಧಿಸಿದ್ದು, ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.
ಘಟನೆ ನಡೆದ ಹೊಸಕೆರೆ ಸಮೀಪದ ಡಾಬಾಗೆ ಡಿವೈಎಸ್‌ಪಿ ಕನಿಕಾ ಸಿಕ್ರಿವಾಲ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಗೌರಿಪುರ ಗ್ರಾಮದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.