ಮನೆ ಅಪರಾಧ ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ: 32 ಹಿರಿಯ ಪೊಲೀಸರ ವರ್ಗಾವಣೆ

ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ: 32 ಹಿರಿಯ ಪೊಲೀಸರ ವರ್ಗಾವಣೆ

0

ಉದಯಪುರ(Udayapura): ರಾಜಸ್ಥಾನದ ಟೈಲರ್ ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆಯ ಹಿನ್ನೆಲೆಯಲ್ಲಿ ಉದಯಪುರದ ಇನ್ಸ್‌ಪೆಕ್ಟರ್ ಜನರಲ್ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಸೇರಿದಂತೆ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿತ್ತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೂ ಬಿಜೆಪಿ ನೂಪುರ್ ಶರ್ಮಾ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಇದರಿಂದ ರಾಜ್ಯದ ಹಲವೆಡೆ ಈ ವಿಚಾರ ಬೂದಿಮುಚ್ಚಿದ ಕೆಂಡದಂತಿದೆ. ಇದರ ನಡುವೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಬೆದರಿಕೆಯ ಕುರಿತು ದೂರು ನೀಡಿದ ನಂತರ 48 ವರ್ಷದ ಟೈಲರ್ ಕನ್ಹಯ್ಯಾ ಲಾಲ್ ಅವರಿಗೆ ಭದ್ರತೆಯನ್ನು ಒದಗಿಸದಿದ್ದಕ್ಕಾಗಿ ಉದಯಪುರ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಕೊಲೆ ಮಾಡಿ ಹಾಗೂ ವಿಡಿಯೋ ಮಾಡಿದ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್  ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯವು ಈ ಸೂಕ್ಷ್ಮ ಪ್ರಕರಣದ ತನಿಖೆಯನ್ನು ದೇಶದ ಉನ್ನತ ಭಯೋತ್ಪಾದನಾ ನಿಗ್ರಹ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಹಸ್ತಾಂತರಿಸಿದೆ.

ರಾಜಸ್ಥಾನ ಪೊಲೀಸ್ ಮುಖ್ಯಸ್ಥ ಎಂಎಲ್ ಲಾಥರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪ್ರಮುಖ ಆರೋಪಿಗಳು ಪಾಕಿಸ್ತಾನ ಮೂಲದ ಗುಂಪು ದಾವತ್-ಎ-ಇಸ್ಲಾಮಿ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದರು. ಅವರಲ್ಲಿ ಒಬ್ಬರು 2014 ರಲ್ಲಿ ಪಾಕಿಸ್ತಾನದ ಕರಾಚಿಗೆ ಸಂಘಟನೆಯನ್ನು ಭೇಟಿಯಾಗಲು ಹೋಗಿದ್ದರು. ನಾವು ಇದನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸುತ್ತಿದ್ದೇವೆ. ಘಟನೆಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳದಿದ್ದಕ್ಕಾಗಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.