ಚಿತ್ರದುರ್ಗ(Chitrdurga): ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ಮೇಲಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣದ 2ನೇ ಆರೋಪಿ ವಾರ್ಡನ್ ರಶ್ಮಿ ಅವರನ್ನು ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಚಿತ್ರದುರ್ಗದ ಎಸ್ಪಿ ಕೆ ಪರಶುರಾಮ್, ಮುರುಘಾ ಮಠದ ಶ್ರೀಗಳ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ವಾರ್ಡನ್ ರಶ್ಮಿ ಬಂಧನವಾಗಿದೆ ಎಂದರು.
ಆರೋಪಿ ರಶ್ಮಿಯನ್ನು ನಿನ್ನೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಇಂದು ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿದ್ದಾರೆ.
ಮುರುಘಾ ಶರಣರೂ ಸೇರಿದಂತೆ ವಸತಿ ನಿಲಯದ ವಾರ್ಡನ್ ರಶ್ಮಿ ಸೇರಿ ಮತ್ತೆ ಮೂವರ ವಿರುದ್ಧ ಪೋಕ್ಸೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದೀಗ ಇಬ್ಬರ ಬಂಧನವಾಗಿದೆ.