ಮೈಸೂರು(Mysuru): ಬಾಲಕಿಯರ ಮೇಲೆ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣದಲ್ಲಿ ಹಿಂದೆ ಸರಿಯುವಂತೆ ಹೇಳಿ ನಮಗೆ ₹ 3 ಕೋಟಿ ಆಮಿಷ ಒಡ್ಡಲಾಗಿತ್ತು ಒಡನಾಡಿ ಸಂಸ್ಥೆ ನಿರ್ದೇಶಕ ಎಂ.ಎಲ್.ಪರಶುರಾಂ ಆರೋಪಿಸಿದರು.
ಇಲ್ಲಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ‘ವಿದ್ಯಾರ್ಥಿಪದಾಧಿಕಾರಿಗಳ ಅಭಿವಿನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮೀಜಿ ಅವರನ್ನು ಬಿಟ್ಟು ಬಿಡಿ ಎಂದು ಮಂತ್ರಿ ಮಹೋದಯರೊಬ್ಬರು ಹೇಳಿದ್ದರು ಎಂದು ತಿಳಿಸಿದರು.
ಸಂತ್ರಸ್ತ ಮಕ್ಕಳು ಗೊಳೋ ಎಂದು ಒಂದೆಡೆ ಅಳುತ್ತಿದ್ದರೆ, ಇನ್ನೊಂದೆಡೆ ಹಣದ ಆಯ್ಕೆಯನ್ನು ಮುಂದೊಡ್ಡಲಾಗಿತ್ತು. ನಾಚಿಕೆ ಇಲ್ಲದ ನಾಯಕರೊಬ್ಬರು ಸ್ವಾಮೀಜಿ ಪರವಾಗಿ ಮನವಿ ಮಾಡಿದ್ದರು ಎಂದರು.
3 ರಿಂದ 16 ವರ್ಷದವರೆಗಿನ, ಸುಮಾರು 23 ಹೆಣ್ಣು ಮಕ್ಕಳ ಮೇಲೆ ಮುರುಘಾ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದರು. 25 ವರ್ಷಗಳಿಂದ ಇಂತಹ ಕೃತ್ಯ ಎಸಗಿದ್ದಾರೆ. ಚಿಕ್ಕ ಹೆಣ್ಣು ಮಗುವೊಂದು ಕಷ್ಟ ಹೇಳಿಕೊಂಡು, ನಮ್ಮ ಬಳಿಗೆ ಬಂದು, ಸ್ವಾಮೀಜಿ ಕಚ್ಚಿದ್ದ ತನ್ನ ಎದೆಭಾಗವನ್ನು ತೋರಿದಾಗ, ತಂದೆ ಸ್ಥಾನದಲ್ಲಿ ನಿಂತು ಮೌನ ವಹಿಸುವುದಾದರೂ ಹೇಗೆ? ಸತ್ಯ– ನ್ಯಾಯಕ್ಕಾಗಿ ಮಕ್ಕಳ ಪರ ಜೀವ ಇರುವವರೆಗೂ ಹೋರಾಡುತ್ತೇವೆ ಎಂದರು.