ಮನೆ ರಾಜ್ಯ ಮುರುಘಾ ಶರಣರ ಪ್ರಕರಣ: ತನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ ಸಿಎಂ ಬೊಮ್ಮಾಯಿ

ಮುರುಘಾ ಶರಣರ ಪ್ರಕರಣ: ತನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ ಸಿಎಂ ಬೊಮ್ಮಾಯಿ

0

ಬೆಂಗಳೂರು (Bengaluru): ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ಸತ್ಯಾಂಶ ತನಿಖೆಯ ನಂತರ ಹೊರಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಪ್ರಮುಖ ಪ್ರಕರಣ. ಪೋಕ್ಸೊ ಪ್ರಕರಣ ದಾಖಲಾಗುವುದರ ಜತೆಯಲ್ಲೇ ಚಿತ್ರದುರ್ಗದಲ್ಲಿ ಅಪಹರಣ ಪ್ರಕರಣವೂ ದಾಖಲಾಗಿದೆ. ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಪ್ರಕರಣದ ಕುರಿತು ಮಾತನಾಡುವುದು, ವ್ಯಾಖ್ಯಾನ ಮಾಡುವುದು ತನಿಖೆಯ ದೃಷ್ಟಿಯಿಂದ ಸರಿಯಲ್ಲ. ಈ ಪ್ರಕರಣದ ತನಿಖೆಯಲ್ಲಿ ಪೊಲೀಸರು ಸಂಪೂರ್ಣ ಸ್ವತಂತ್ರರು. ತನಿಖೆಯ ಬಳಿಕ ಸತ್ಯ ಏನೆಂಬುದು ಹೊರಬರಲಿದೆ ಎಂದರು.

ಜಿಲ್ಲಾಧಿಕಾರಿಗಳ ಜತೆ ಚರ್ಚೆ: ರಾಜ್ಯದಲ್ಲಿ ಮಳೆಯಿಂದ ಅತಿಹೆಚ್ಚು ಹಾನಿಯಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಂಜೆ ಚರ್ಚೆ ನಡೆಸುತ್ತೇನೆ. ಆ ಬಳಿಕ ಹೆಚ್ಚಿನ ಪರಿಹಾರ ನೀಡುವ ಕುರಿತು ತೀರ್ಮಾನಕ್ಕೆ ಬರಲಾಗುವುದು ಎಂದರು.

ಚಾಮರಾಜಪೇಟೆಯ ಈದ್ಗಾ ಮೈದಾನದ ವಿಚಾರದಲ್ಲಿ ಗೊಂದಲವೇನೂ ಇಲ್ಲ. ಗಣೇಶೋತ್ಸವ ಆಚರಣೆ ಕುರಿತು ಕಂದಾಯ ಸಚಿವರು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಅರ್ಜಿಗಳ ಪರಿಶೀಲನೆಯೂ ನಡೆಯುತ್ತಿದೆ. ಈ ಪ್ರಕ್ರಿಯೆ ಮುಗಿದ ತಕ್ಷಣ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಹಿಂದಿನ ಲೇಖನಕೋವಿಡ್‌ ಚೇತರಿಕೆಯ ಬಳಿಕ ಭಾರತ ತಂಡ ಸೇರಲಿರುವ ಕೋಚ್‌ ರಾಹುಲ್‌ ದ್ರಾವಿಡ್
ಮುಂದಿನ ಲೇಖನಬೆಂಗಳೂರು-ಮೈಸೂರು ದಶಪಥ ಬಂದ್‌: ಪರ್ಯಾಯ ಮಾರ್ಗ ಬಳಕೆಗೆ ಸೂಚನೆ